Visitors have accessed this post 798 times.
ಉಳ್ಳಾಲ: ಬೈಕ್ ಗೆ ಕಾರು ಢಿಕ್ಕಿ, ಸವಾರ ದಾರುಣ ಸಾವು..!
ಉಳ್ಳಾಲ ಸಮೀಪ ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಥಾರ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಕಾರಿನ ಚಕ್ರ ಸಿಡಿದು ಮುಂಬದಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ಸವಾರ ಡಿವೈಡರ್ ಗೆ ಬಡಿದು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕೊಲ್ಯ ಬಳಿ ಇಂದು ನಡೆದಿದೆ ಸಾವನ್ನಪ್ಪಿದವರು ಕೊಲ್ಯ ನಿವಾಸಿ ಸಂತೋಷ್ ಬೆಳ್ಚಾಡ (45) ಎಂದು ತಿಳಿದು ಬಂದಿದೆ.
ಜೀಪಿನಲ್ಲಿದ್ದ ಯುವಕರು ಗಾಂಜಾ ನಶೆಯಲ್ಲಿದ್ದು, ಅವರ ಅಜಾಗರೂಕತೆಯ ವಾಹನ ಚಾಲನೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸಂತೋಷ್ ಬಾಳೆಹಣ್ಣು ವ್ಯಾಪಾರಿಯಾಗಿದ್ದು, ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ಸಂದರ್ಭ ಘಟನೆ ಸಂಭವಿಸಿದೆ.
ಮಂಗಳೂರು ಕಡೆಯಿಂದ ಅತಿ ವೇಗ ಹಾಗೂ ಅಜಾಗರೂಕತೆಯ ಚಾಲನೆಯಲ್ಲಿದ್ದ ಜೀಪ್ ಎದುರಿನಲ್ಲಿ ಧರ್ಮಸ್ಥಳದಿಂದ ಕಾಞಂಗಾಡ್ ಗೆ ಕುಟುಂಬ ಸಮೇತರಾಗಿ ತೆರಳುತ್ತಿದ್ದ ಬಲೇನೋ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ.
ಆಯತಪ್ಪಿದ ಕಾರು ಎದುರಿನಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ದ್ವಿಚಕ್ರ ವಾಹನದ ಹಿಂಬದಿಗೆ ಢಿಕ್ಕಿ ಹೊಡೆದಿದೆ. ಬೈಕ್ ಡಿವೈಡರ್ ಗೆ ಬಡಿದ ಪರಿಣಾಮ ಸಂತೋಷ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ತೆರಳುವ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.
ವಿವಾಹಿತರಾಗಿದ್ದ ಸಂತೋಷ್ ಪತ್ನಿ, ಇಬ್ಬರು ಪುತ್ರಿಯರನ್ಬು ಮತ್ತು ತಂದೆ ತಾಯಿಯನ್ನು ಅಗಲಿದ್ದಾರೆ. ಶ್ರಮಜೀವಿಯಾಗಿದ್ದ ಇವರು ಕುಟುಂಬದ ಆಧಾರ ಸ್ತಂಭವಾಗಿದ್ದರು. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ.