
ಬೆಂಗಳೂರು : ಬೆಂಗಳೂರಿನ ಕುಂದಲ ಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್‌ಐಎ ತಂಡ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದು ಬೆಂಗಳೂರು ಅಷ್ಟೇ ಅಲ್ಲದೆ ಹೊರ ರಾಜ್ಯಗಳಲ್ಲೂ ಕೂಡ ಅಧಿಕಾರಿಗಳ ತಂಡ ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದುಬಂದಿದೆ.



ನಗರದ ವೈಟ್‌ಫೀಲ್ಡ್ ಸನಿಹದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತನಿಖೆ ಚುರುಕುಗೊಳಿಸಿದ್ದು, ಕೆಲವು ಶಂಕಿತರ ಮಾಹಿತಿ ಮೇರೆಗೆ ಬೆಂಗಳೂರು ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ ಸಹ ಕಾರ್ಯಾಚರಣೆ ನಡೆಸಿದೆ.ತನಗೆ ಅಧಿಕೃತವಾಗಿ ತನಿಖೆ ವಹಿಸಿದ ಬಳಿಕ ಮಂಗಳವಾರ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಗೆ ಮತ್ತೆ ಎನ್‌ಐಎ ತಂಡವು ಭೇಟಿ ನೀಡಿ ಪರಿಶೀಲಿಸಿತು. ಈ ವೇಳೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು, ಕೆಫೆ ಮುಂಭಾಗದಲ್ಲೇ ಇರುವ ಬಸ್ ನಿಲ್ದಾಣದಿಂದ ಕೆಫೆ ವರೆಗೆ ಶಂಕಿತ ವ್ಯಕ್ತಿ ನಡೆದು ಬಂದಿರುವ ಹಾದಿಯನ್ನು ತೀವ್ರವಾಗಿ ತಪಾಸಣೆ ನಡೆಸಿದರು.ಅಲ್ಲದೆ ತಮಿಳುನಾಡಿನ ಚೆನ್ನೈ ಹಾಗೂ ಕೇರಳ ರಾಜ್ಯಗಳಲ್ಲಿ ಶಂಕಿತರ ಸಂಪರ್ಕ ಜಾಲದ ಮಾಹಿತಿ ಮೇರೆಗೆ ಎನ್‌ಐಎ ಕಾರ್ಯಾಚರಣೆಗಿಳಿದೆ ಎನ್ನಲಾಗಿದೆ. ಇನ್ನು ಕೆಫೆ ಪ್ರಕರಣ ಸಂಬಂಧ ಚೆನ್ನೈನಲ್ಲಿ ಐವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಮಾಹಿತಿಯನ್ನು ನಿರಾಕರಿಸಿದ ಅಧಿಕಾರಿಗಳು, ಇದುವರೆಗೆ ಯಾರನ್ನು ವಶಕ್ಕೆ ಪಡೆದಿಲ್ಲ ಎಂದಿದ್ದಾರೆ.