ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿವರ್ತನೆಗೆ ಅವಕಾಶವಿದೆ. ಹೊಸಬರಿಗೆ ಅವಕಾಶ ಕೊಡುವುದಾದರೆ ನನ್ನಿಂದ ಅಡ್ಡಿಯಿಲ್ಲ ಎಂದು ಆರು ತಿಂಗಳ ಮೊದಲೇ ಪಕ್ಷದ ಹಿರಿಯರಿಗೆ ತಿಳಿಸಿದ್ದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಟಿಕೆಟ್ ಕೈತಪ್ಪಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕ್ಯಾ.ಬ್ರಿಜೇಶ್ ಚೌಟ ಅವರನ್ನು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.
ಬಿಜೆಪಿ ನನಗೆ 15 ವರ್ಷಗಳ ದೊಡ್ಡ ಅವಕಾಶ ಕೊಟ್ಟಿದೆ. ಈ ಕ್ಷೇತ್ರದ ಸಂಸದನಾಗಲು ಪಕ್ಷದ ಹಿರಿಯರು ಅವಕಾಶ ಕೊಟ್ಟಿದ್ದಾರೆ. ನನ್ನನ್ನು ಕಾರ್ಯಕರ್ತರು ಅಹೋರಾತ್ರಿ ದುಡಿದು ಗೆಲ್ಲಿಸಿದ್ದಾರೆ. ಕ್ಷೇತ್ರದ ಮತದಾರರು ಗೆಲ್ಲಿಸಿ ಆಶೀರ್ವಾದ ಮಾಡಿದ್ದಾರೆ. ನಾನು ಪ್ರಾಮಾಣಿಕ ರಾಜಕಾರಣ ಮಾಡಿದ್ದೇನೆ. ಕ್ಷೇತ್ರಕ್ಕೆ 1 ಲಕ್ಷ ಕೋಟಿ ಅನುದಾನವನ್ನು ತಂದಿದ್ದೇನೆ ಎಂದರು.
ನಾಲ್ಕೂವರೆ ವರ್ಷ ರಾಜ್ಯಾಧ್ಯಕ್ಷನಾಗಿದ್ದಾಗ ಕಾರ್ಯಕರ್ತರು, ಜನರು ಸಹಕಾರ ಕೊಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಕಾಲ ಸಂಸದನಾಗಿ ಕೆಲಸ ಮಾಡಿದ್ದೇನೆ. ನನಗೆ ಸಹಕಾರ ಕೊಟ್ಟ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ಬಿಜೆಪಿ ಕಾರ್ಯಕರ್ತನಾಗಿ ಪಕ್ಷ ಹೇಳಿದ ಕೆಲಸ ಮಾಡುತ್ತೇನೆ. ಮೋದಿ ಪ್ರಧಾನಿಯಾಗಲು ಬ್ರಿಜೇಶ್ ಚೌಟ ಅವರಿಗೆ ಎಲ್ಲರೂ ಬೆಂಬಲಿಸಬೇಕು ಎಂದು ನಳಿನ್ ಕುಮಾರ್ ಕಟೀಲು ಮನವಿ ಮಾಡಿದರು.