Visitors have accessed this post 324 times.
ಉಡುಪಿ: ಬಿಜೆಪಿಯಿಂದ ನನ್ನನ್ನು ಉಚ್ಛಾಟನೆ ಮಾಡಿರುವುದು ಮಾಧ್ಯಮದ ಮೂಲಕ ತಿಳಿದು ಬೇಸರವಾಯಿತು. ಶಿಸ್ತು ಸಮಿತಿಯಿಂದ ನನಗೆ ಈವರೆಗೆ ಯಾವುದೇ ನೋಟಿಸ್ ತಲುಪಿಲ್ಲ. ಈ ಉಚ್ಚಾಟನೆಗೆಲ್ಲ ನಾನು ತಲೆ ಬಿಸಿ ಮಾಡಿಕೊಳ್ಳಲ್ಲ ಎಂದು ವಿಧಾನ ಪರಿಷತ್ ನೈರುತ್ಯ ಕ್ಷೇತ್ರದ ಬಂಡಾಯ ಅಭ್ಯರ್ಥಿ, ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪಕ್ಷ ಅಂದರೆ ಜೀವ ಬಿಡುವ ಕಾರ್ಯಕರ್ತರಿಗೆ ಬಿಜೆಪಿಯಿಂದ ನಿರಂತರ ನೋವಾಗುತ್ತಿದೆ. ನನ್ನನ್ನು ಪಕ್ಷದ ಎಲ್ಲಾ ಹುದ್ದೆಯಿಂದ ವಜಾ ಮಾಡುವುದಾಗಿ ಹೇಳಿದ್ದಾರೆ. ನನ್ನದು ಕಾರ್ಯಕರ್ತ ಹುದ್ದೆ ಆಗಿದೆ. ಪಕ್ಷದಲ್ಲಿ ನನಗೆ ಯಾವ ಹುದ್ದೆಯನ್ನೂ ಕೊಟ್ಟಿಲ್ಲ. ಬಿಜೆಪಿ ನನ್ನನ್ನು ಯಾವ ಹುದ್ದೆಯಿಂದ ವಜಾ ಮಾಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಪಕ್ಷದ ವ್ಯವಸ್ಥೆಯ ಬಗ್ಗೆ ಅಸಮಾಧಾನ ಇದೆ : ಟಿಕೆಟ್ ತಪ್ಪಿದಾಗ ಸ್ಥಾನಮಾನ ಕೊಡುತ್ತೇವೆ ಎಂದಿದ್ದರು. ಪಕ್ಷ ನನ್ನನ್ನು ರಾಜ್ಯ ಕಾರ್ಯಕಾರಿ ಸದಸ್ಯ ಕೂಡ ಮಾಡಿಲ್ಲ. ನಾನು ನರೇಂದ್ರ ಮೋದಿ ಆಗಲಿ, ರಾಜ್ಯ ನಾಯಕರಿಗೆ ಆಗಲಿ ಬೈದಿಲ್ಲ. ಬಿಜೆಪಿ ಪಕ್ಷದ ವ್ಯವಸ್ಥೆಯ ಬಗ್ಗೆ ನನಗೆ ಅಸಮಾಧಾನ ಇದೆ ಎಂದು ಅವರು ತಿಳಿಸಿದರು. ಪಕ್ಷ ನಾಯಕರನ್ನು ಟೀಕೆ ಮಾಡಿದ ಜಗದೀಶ್ ಶೆಟ್ಟರ್ ಒಂದೇ ವರ್ಷದಲ್ಲಿ ಪಕ್ಷಕ್ಕೆ ವಾಪಾಸಾದರು. ಪಕ್ಷಕ್ಕೆ ವಾಪಸ್ ಆಗಿ ಲೋಕಸಭಾ ಟಿಕೆಟ್ ಕೂಡ ಪಡೆದುಕೊಂಡರು. ಇದು ಶಾಶ್ವತ ವಜಾ ಅಲ್ಲ. ಪರಿಷತ್ ಚುನಾವಣೆಯಲ್ಲಿ ನಾನು ಗೆದ್ದ ಮೇಲೆ ವಜಾ ರದ್ದಾಗುತ್ತದೆ. ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಯಾರಿಗೂ ವಜಾ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಶಿಸ್ತು ಸಮಿತಿಗೆ ನನ್ನ ಹಲವು ಪ್ರಶ್ನೆ ಇದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ಮೇಲೆ ಏನು ಶಿಸ್ತು ಕ್ರಮವಾಗಿದೆ?. ಅಡ್ಡ ಮತದಾನ ಮಾಡಿದ ಇಬ್ಬರೂ ಶಾಸಕರನ್ನ ಏನು ಮಾಡಿದ್ದೀರಿ?. ವಜಾ ಮಾಡಿದ್ದೀರಾ?. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿದ ಶಾಸಕರನ್ನು ವಜಾ ಮಾಡಿದ್ದೀರಾ?. ಅಗೋಚರವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡುವವರ ಮೇಲೆ ಏನು ಕ್ರಮ ಆಗಿದೆ ಎಂದು ಅವರು ಪ್ರಶ್ನಿಸಿದರು. ಕಾರ್ಯಕರ್ತರಿಂದ ಸರಿಯಾದ ಉತ್ತರ: ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಸೋಲಿಸಲು ಯಾರಿಗೆ ಎಷ್ಟು ಹಣ ಹೋಗಿದೆ, ಯಾರು ಕೆಲಸ ಮಾಡಿದ್ದಾರೆ ಎಂದು ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳೇ ಆರೋಪ ಮಾಡುತ್ತಿದ್ದಾರೆ. ವಿಪ್ ಉಲ್ಲಂಘನೆ ಮಾಡಿದವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ನಾನೊಬ್ಬ ಪಾಪ, ಬಡಪಾಯಿ ಮಾತ್ರ ನಿಮಗೆ ವಜಾ ಮಾಡಲು ಸಿಕ್ಕಿರುವುದೇ?. ನಾನು ವಿಚಲಿತನಾಗಿಲ್ಲ ಚುನಾವಣೆ ಗೆದ್ದು ಮತ್ತೆ ಬಿಜೆಪಿಯ ಶಾಸಕನಾಗುತ್ತೇನೆ ಎಂದು ರಘುಪತಿ ಭಟ್ ಹೇಳಿದರು.
ಜಗದೀಶ್ ಶೆಟ್ಟರ್ ಅವರ ಪ್ರಕರಣವೇ ನನಗೆ ಮಾದರಿ. ಕರಾವಳಿ ಬಿಜೆಪಿ ಕಾರ್ಯಕರ್ತರಿಗೆ ಶಿಸ್ತು ಜಾಸ್ತಿ ಹಾಗೂ ಶಿಕ್ಷೆಯೂ ಜಾಸ್ತಿ. ಉಡುಪಿಯಲ್ಲಿ ನಾಲ್ವರು ಸಿಟ್ಟಿಂಗ್ ಎಂಎಲ್‌ಎಗಳನ್ನು ಬದಲಿಸಲಾಯಿತು. ಇದನ್ನು ಶಿವಮೊಗ್ಗ, ಬೆಂಗಳೂರು, ಬಾಗಲಕೋಟೆ, ಹುಬ್ಬಳ್ಳಿಯಲ್ಲಿ ಇವರಿಗೆ ಮಾಡಲು ಸಾಧ್ಯವೇ?. ಉಡುಪಿಯ ಕಾರ್ಯಕರ್ತರು ಸಂಘ, ಪಕ್ಷ ಎಂದು ಕೆಲಸ ಮಾಡುತ್ತಾರೆ. ಕರಾವಳಿ ವಿಚಾರದದಲ್ಲಿ ಬಿಜೆಪಿ ಮನಬಂದಂತೆ ನಡೆದುಕೊಳ್ಳುತ್ತಿದೆ. ಕರಾವಳಿಗೆ ಮೀಸಲಿಟ್ಟ ಸ್ಥಾನವನ್ನು ಶಿವಮೊಗ್ಗಕ್ಕೆ ಕೊಟ್ಟಿದ್ದಾರೆ. ಈ ಚುನಾವಣೆಯಲ್ಲಿ ಮತದಾರರು ಕಾರ್ಯಕರ್ತರು ಅದಕ್ಕೆ ಸರಿಯಾದ ಉತ್ತರ ಕೊಡುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.