ಪ್ರಜ್ವಲ್‌ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್‌ ರೇವಣ್ಣ ಅವರಿಗೆ 42ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.ಪ್ರಜ್ವಲ್‌ ರೇವಣ್ಣ ಅವರ ಎಸ್‌‍ಐಟಿ ಕಸ್ಟಡಿ ಅವಧಿ ಇಂದು ಮುಗಿದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡಬೇಕೆಂದು ಮಾಡಿದ ಮನವಿಯನ್ನು ನಿರಾಕರಿಸಿದ ನ್ಯಾಯಾಲಯ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತು.

 

ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅವರು ವಿದೇಶಕ್ಕೆ ಪರಾರಿಯಾಗಿದ್ದರು. ಪ್ರಕರಣದ ತನಿಖೆಗೆ ಸರ್ಕಾರ ಎಸ್‌‍ಐಟಿ ರಚನೆ ಮಾಡಿತ್ತು. ಅವರು ವಿದೇಶದಿಂದ ಬರುತ್ತಿದ್ದಂತೆ ಅವರನ್ನು ವಶಕ್ಕೆ ಪಡೆದ ಎಸ್‌‍ಐಟಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿತ್ತು. ಎರಡು ಪ್ರಕರಣದಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿರುವ ಪೊಲೀಸರು ಇಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಹೊಳೆನರಸೀಪುರದಲ್ಲಿ ಪ್ರಜ್ವಲ್ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳಲ್ಲಿ ವಿಚಾರಣೆಯನ್ನು ಅಂತ್ಯಗೊಳಿಸಿರುವ ಎಸ್‌ಐಟಿ ಮತ್ತೊಂದು ಪ್ರಕರಣದಲ್ಲಿ ವಿಚಾರಣೆ ನಡೆಸಲು ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಸರ್ಕಾರಿ ಪರ ವಕೀಲರು ಮನವಿ ಮಾಡಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಜ್ವಲ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು. ಮೂರನೇ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಬಾಡಿ ವಾರಂಟ್‌ ಪಡೆಯಲು ಅರ್ಜಿ ಸಲ್ಲಿಸಲು ನ್ಯಾಯಾಲಯ ಸೂಚಿಸಿದೆ.

Leave a Reply