Visitors have accessed this post 327 times.
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿಯನ್ನು ಅವಮಾನಿಸಿ, ಮತೀಯ ಸಂಘರ್ಷವನ್ನು ಸೃಷ್ಟಿಸಿ ಸಮಾಜದ ನೆಮ್ಮದಿ ಮತ್ತು ಶಾಂತಿಯನ್ನು ಕದಡುವಂತೆ ಪ್ರೇರೇಪಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿ ತಾಲೂಕು ಆಡಳಿತದಿಂದ ಆಡಳಿತ ಸೌಧದ ಮುಂಭಾಗದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಈ ದೇಶಕ್ಕೆ ಕೇವಲ ಶಾಂತಿಯಿಂದ, ಕೇವಲ ಚರಕ ತಿರುಗಿಸಿದರಿಂದ ಸ್ವಾತಂತ್ರ್ಯ ಬಂದಿಲ್ಲ ಎಂದು ಮಹಾತ್ಮ ಗಾಂಧೀಜಿಯನ್ನು ಅವಮಾನಿಸಿದ್ದಾರೆ. ಜೊತೆಗೆ ಸಮಾಜದಲ್ಲಿ ಹಿಂದೂ ಮುಸ್ಲಿಂ ಸಮುದಾಯದವರಲ್ಲಿ ಕಂದಕವನ್ನು ಸೃಷ್ಟಿ ಮಾಡಿ ಸಮಾಜದ ನೆಮ್ಮದಿ ಕದಡುವಂತೆ ಪ್ರೇರೇಪಿಸಿದ್ದಾರೆ. ಆದ್ದರಿಂದ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಠಾಣೆಗೆ ದೂರು ದಾಖಲಾಗಿದೆ.