Visitors have accessed this post 499 times.
ಮೂಡಿಗೆರೆ : ವಿವಾಹಿತ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ. ಮೂಡಿಗೆರೆ ತಾಲ್ಲೂಕಿನ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾವಿನಕೂಡಿಗೆ ಗ್ರಾಮದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಸೋಮವಾರ ಸಂಜೆ ವಿವಾಹಿತ ಮಹಿಳೆ ಸುಬೀಕ್ಷಾ (26 ವರ್ಷ) ತನ್ನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಈ ಸಾವಿನ ಬಗ್ಗೆ ಆಕೆಯ ತವರು ಮನೆಯವರು ಅನುಮಾನ ವ್ಯಕ್ತಪಡಿಸಿ ಬಾಳೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೃತ ಸುಭೀಕ್ಷಾ ತಂದೆ ಚಿನ್ನೇಗೌಡ ತನ್ನ ಮಗಳಿಗೆ ಪತಿ, ಮಾವ ಮತ್ತು ಅತ್ತೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು, ತನ್ನ ಮಗಳ ಸಾವಿನ ಬಗ್ಗೆ ಅನುಮಾನವಿದ್ದು ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಬಾಳೂರು ಪೊಲೀಸರು ಮೃತ ಸುಭೀಕ್ಷಾ ಪತಿ ಎಂ.ಸಿ.ಪ್ರವೀಣ, ಮಾವ ಚಂದ್ರೇಗೌಡ ಅತ್ತೆ ಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಮೂಡಿಗೆರೆ ತಹಸೀಲ್ದಾರ್ ಮತ್ತು ಡಿವೈಎಸ್ಪಿ ಅವರ ಸಮ್ಮುಖದಲ್ಲಿ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ ನಂತರ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗುತ್ತದೆ ಎಂದು ತಿಳಿದುಬಂದಿದೆ.
ಕಳಸ ತಾಲ್ಲೂಕು ಸಂಸೆ ಸಮೀಪದ ಮಲವಂತಿಗೆ ಗ್ರಾಮದ ಚಿನ್ನೇಗೌಡ ಅವರ ಮಗಳು ಸುಬೀಕ್ಷಾ ಅವರನ್ನು 2020ರ ಮೇ 29ರಂದು ಬಾಳೂರು ಹೋಬಳಿ ಮರ್ಕಲ್ ಗ್ರಾಮದ ಚಂದ್ರೇಗೌಡ ಅವರ ಪುತ್ರ ಪ್ರವೀಣ್ ಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗಳಿಗೆ 3 ವರ್ಷದ ಮಗುವಿದ್ದು, ಸುಬೀಕ್ಷಾ ಸಾವಿಗೆ ಕುಟುಂಬದವರ ಕಿರುಕುಳವೇ ಕಾರಣ ಎಂದು ಆಕೆಯ ಸಂಬಂಧಿಕರು ದೂರಿದ್ದು, ತಪ್ಪಿತಸ್ತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.