Visitors have accessed this post 217 times.
ಮಂಗಳೂರು: “ಅಂಚೆ ಅಪಘಾತ ವಿಮಾ ಯೋಜನೆ ದೇಶದ ಅತ್ಯುತ್ತಮ ಸರಳವಾದ ಜನಸಾಮಾನ್ಯರ ಕೈಗೆಟುಕುವ ವಿಮಾ ಯೋಜನೆಯಾಗಿದೆ” ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ನೇತೃತ್ವದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆಯಿಂದ ಪತ್ರಿಕಾ ಭವನದಲ್ಲಿ ರವಿವಾರ ಹಮ್ಮಿಕೊಂಡ ಅಂಚೆ ಅಪಘಾತ ವಿಮಾ ಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ ಒಂದು ಲಕ್ಷ ಅರುವತ್ತನಾಲ್ಕು ಸಾವಿರ ಅಂಚೆ ಕಚೇರಿಗಳನ್ನು ಹೊಂದಿರುವ ಬಲಿಷ್ಠವಾದ ಸೇವಾ ಜಾಲವನ್ನು ಹೊಂದಿದೆ. ನೂತನ ಅಂಚೆ ಪಾವತಿ ಬ್ಯಾಂಕ್ ಆರು ವರ್ಷ ಪೂರ್ಣ ಗೊಳಿಸಿ 7ನನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಅಂಚೆ ಇಲಾಖೆಯ ಅಪಘಾತ ವಿಮಾಯೋಜನೆ ಆದಿತ್ಯ ಬಿರ್ಲಾ ಸಂಸ್ಥೆಯ ಜೊತೆ ಒಡಂಬಡಿಕೆಯೊಂದಿಗೆ ಜಾರಿಯಾಗಿದೆ. ಇದನ್ನು ಇದು 10 ಮತ್ತು 15 ಲಕ್ಷ ರೂಪಾಯಿ ಮೊತ್ತದ ಅಪಘಾತ ವಿಮಾಯೋಜನೆಗೆ ಕ್ರಮವಾಗಿ ರೂ. 549 ರೂ.749 ವಿಮಾ ಕಂತು ಪಾವತಿಸಿದ ಬಳಿಕ ಯಾವುದೇ ಅಂಚೆ ಕಚೇರಿಯ ಮೂಲಕ ದಾಖಲೆ ಸಲ್ಲಿಸಿ ಸಣ್ಣಪುಟ್ಟ ಅಪಘಾತ ಸಂಭವಿಸಿದಾಗ ನಿರ್ದಿಷ್ಟ ವಿಮಾ ಪರಿಹಾರ ಮೊತ್ತ ಪಡೆಯಬಹುದು. ಶಾಶ್ವತ ಅಂಗ ವೈಕಲ್ಯದ ಸಂದರ್ಭದಲ್ಲಿ ಮತ್ತು ಮರಣ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವಿಮಾ ಮೊತ್ತ ಪಡೆಯಬಹುದು.
ಇದಲ್ಲದೆ ಅಂಚೆ ಪಾವತಿ ಬ್ಯಾಂಕ್ ಆದ ಬಳಿಕ ಭಾರತೀಯ ಅಂಚೆ ಇಲಾಖೆ ಆಧಾರ್ ನೋಂದಣಿ, ಠೇವಣಿ ಸ್ವೀಕಾರ, ಕೇಂದ್ರ ಸರಕಾರದ ವಿವಿಧ ಯೋಜನೆ, ಸುಕನ್ಯಾ ಸಮೃದ್ಧಿ, ಮಹಿಳಾ ಸಮ್ಮಾನ್, ಕಿಸಾನ್ ವಿಕಾಸ್ ಸರ್ಟಿಫಿಕೇಟ್, ಅಟಲ್ ಪೆನ್ಷನ್ ಯೋಜನೆ ಸೇರಿದಂತೆ ವಿಸ್ತೃತವಾದ ಸೇವೆ ನೀಡುತ್ತಿದೆ ಎಂದು ಸುಧಾಕರ ಮಲ್ಯ ವಿವರಿಸಿದರು.
ಪತ್ರಕರ್ತರಿಗೆ ವಿಮಾ ನೋಂದಾವಣೆ ಉಚಿತವಾಗಿದೆ.ಪ್ರತಿಯೊಬ್ಬರ ವಿಮಾ ವಾರ್ಷಿಕ ಪಾಲಿಸಿ ರೂ.549 ವೆಚ್ಚವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆ ಯಿಂದ (ಒಂದು ವರ್ಷಕ್ಕೆ ) ಪಾವತಿಸ ಲಾಗುತ್ತಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾಹಿತಿ ನೀಡಿದರು.
ಸಮಾರಂಭದಲ್ಲಿ ಇಂಡಿಯನ್ ಪೋಸ್ಟಲ್ ಬ್ಯಾಂಕ್ ಮಂಗಳೂರು ಇದರ ವ್ಯವಸ್ಥಾಪಕರಾದ ಶಿಯಾಝ್ ಬಿ,, ಭಾರತೀಯ ಅಂಚೆ ಇಲಾಖೆಯ ಮಂಗಳೂರು ಪ್ರದಾನ ಅಂಚೆ ಕಚೇರಿಯ ಅಸಿಸ್ಟೆಂಟ್ ಪೋಸ್ಟ್ ಮಾಸ್ಟರ್, ಎಚ್.ಆರ್.ಚಂದ್ರಶೇಖರ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತರಾದ ಆನಂದ ಶೆಟ್ಟಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯ ಆರಿಫ್ ಪಡುಬಿದ್ರೆ, ಸಂದೇಶ್ ಜಾರ, ಸತೀಶ್ ಇರಾ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.