ಹೋಟೆಲ್ ರೂಂ ನಲ್ಲಿ ಮಲಯಾಳಂ ನಟ ದಿಲೀಪ್ ಶಂಕರ್ ಶವವಾಗಿ ಪತ್ತೆ!

ತಿರುವನಂತಪುರ: ಚಲನಚಿತ್ರ ಮತ್ತು ಕಿರುತೆರೆ ನಟ ದಿಲೀಪ್ ಶಂಕರ್ ಭಾನುವಾರ ತಿರುವನಂತಪುರದ ವ್ಯಾನ್‌ರಾಸ್ ಜಂಕ್ಷನ್ ಬಳಿಯ ಹೋಟೆಲ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಘಟನೆ ನಂತರ ಕಂಟೋನ್ಮೆಂಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಟ ದಿಲೀಪ್ ಶಂಕರ್ ನಾಲ್ಕು ದಿನಗಳ ಹಿಂದೆ ಹೋಟೆಲ್‌ಗೆ ಚೆಕ್ ಇನ್ ಆಗಿದ್ದರು. ಆ ಬಳಿಕ ಅವರು ಒಮ್ಮೆಯೂ ಹೋಟೆಲ್‌ನ ತಮ್ಮ ಕೊಠಡಿಯಿಂದ ಹೊರಬರಲಿಲ್ಲ. ಸಹನಟರು ಯಾರೇ ಕರೆ ಮಾಡಿದರೂ ಫೋನ್ ಸ್ವೀಕರಿಸಿಲ್ಲ. ಹೀಗಾಗಿ ಅನುಮಾನಗೊಂಡು ಹೋಟೆಲ್‌ಗೆ ಆಗಮಿಸಿ ಸಿಬ್ಬಂದಿ ಬಳಿ ವಿಚಾರಿಸಿದ್ದಾರೆ. ಕೊನೆಗೆ ಕೊಠಡಿಯ ಬಾಗಿಲು ತೆರೆದಾಗ ಶವವಾಗಿ ಪತ್ತೆಯಾಗಿದ್ದಾರೆ’ ಎಂದು ವರದಿಯಾಗಿದೆ. ನಟನ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ್ದಾರೆ. ಕೊಠಡಿಯನ್ನು ಪರೀಕ್ಷಿಸಲು ವಿಧಿವಿಜ್ಞಾನ ತಂಡವನ್ನು ನಿಯೋಜಿಸಲಾಗಿದೆ ಎಂದು ಕಂಟೋನ್ಮೆಂಟ್ ಎಸಿಪಿ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ನಂತರವೇ ಸಾವಿಗೆ ನಿಖರವಾದ ಕಾರಣ ಪತ್ತೆಯಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸರಣಿ ಕಾರ್ಯಕ್ರಮ ‘ಪಂಚಾಗ್ನಿ’ ಚಿತ್ರೀಕರಣದ ಭಾಗವಾಗಿ ದಿಲೀಪ್ ಶಂಕರ್ ತಿರುವನಂತಪುರದಲ್ಲಿ ಇದ್ದರು. ದಿಲೀಪ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಕಾರ್ಯಕ್ರಮದ ನಿರ್ದೇಶಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎರ್ನಾಕುಲಂ ಮೂಲದವರಾದ ದಿಲೀಪ್ ಶಂಕರ್ ಹಲವಾರು ಜನಪ್ರಿಯ ಮಲಯಾಳಂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಮ ಇರಿಯಾತೆ, ಪಂಚಾಗ್ನಿ ಮತ್ತು ಸುಂದರಿ ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

Leave a Reply