
ಪುತ್ತೂರು : ಖಾಸಗಿ ಬಸ್ ನಲ್ಲಿ ಸಂಚರಿಸುತ್ತಿದ್ದ ಸರಕಾರಿ ಅಧಿಕಾರಿಯ ಪರ್ಸನ್ನು ಮಹಿಳೆಯರು ಎಗರಿಸಿದ ಘಟನೆ ನಡೆದಿದೆ. ಅಧಿಕಾರಿಯ ಪರ್ಸ್ ಕಳ್ಳತನ ಮಾಡುವ ದೃಶ್ಯ ಬಸ್ಸ್ ನಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಪುತ್ತೂರು ತಾಲೂಕು ಪಂಚಾಯತ್ ಕಚೇರಿಯ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸುಕನ್ಯಾ ಬಾಸ್ ಕಳೆದುಕೊಂಡ ಸರಕಾರಿ ಅಧಿಕಾರಿ. ಸುಕನ್ಯಾ ಮಂಗಳೂರಿನಿಂದ ಪುತ್ತೂರಿಗೆ ಪ್ರತಿನಿತ್ಯ ಖಾಸಗಿ ಬಸ್ ನಲ್ಲಿ ಸಂಚರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.
ಈ ದಿನವು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಕಲ್ಲಡ್ಕ ದಲ್ಲಿ ಬಸ್ ಗೆ ಹತ್ತಿದ ಮಹಿಳೆಯೋರ್ವರು ಸುಕನ್ಯಾ ಕುಳಿತಿದ್ದ ಸೀಟ್ನಲ್ಲಿ ಕುಳಿತಿದ್ದರು. ಸುಕನ್ಯಾ ಪುತ್ತೂರಿಗೆ ಬಸ್ ತಲುಪಿದ ಬಳಿಕ ಬಸ್ನಿಂದ ಇಳಿದು ಮೆಡಿಕಲ್ ಶಾಪಿಗೆ ತೆರಳಿ ಪರ್ಸ್ ಗೆ ತಡಕಾಡಿದ ಸಂದರ್ಭದಲ್ಲಿ ಪರ್ಸ್ ಇಲ್ಲದಿರುವುದು ಸುಕನ್ಯಾ ಗಮನಕ್ಕೆ ಬಂದಿದೆ.
ತಕ್ಷಣವೇ ಸುಕನ್ಯ ತಾನು ಬಂದ ಬಸ್ಸಿಬ್ಬಂದಿಗೆ ಕರೆ ಮಾಡಿ ಪರ್ಸ್ ಕಳೆದುಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ. ಬಸ್ ಸಿಬ್ಬಂದಿಗಳು ಬಸ್ ನಲ್ಲಿದ್ದ ಸಿಸಿ ಕ್ಯಾಮೆರಾವನ್ನು ಚೆಕ್ ಮಾಡಿದ ಸಂದರ್ಭ ಮಹಿಳೆಯು ಸುಕನ್ಯಾ ಅವರ ಬ್ಯಾಗ್ ನಿಂದ ಪರ್ಸನ್ನು ಕಲಿಯುತ್ತಿರುವುದು ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಸುಕನ್ಯ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ.