

ಮಂಗಳೂರು : ಅಸಹಾಯಕ ಸ್ಥಿತಿಯಲ್ಲಿದ್ದಾನೆಂದು ಭಾವಿಸಿ ವೈಟ್ ಡೌವ್ಸ್ ಸಂಸ್ಥೆಯಿಂದ ರಕ್ಷಿಸಲ್ಪಟ್ಟ ತಮಿಳುನಾಡು ಮೂಲದ ವ್ಯಕ್ತಿಯೊಬ್ಬ, ಅಲ್ಲಿನ ಭಯಾನಕ ಕೊಲೆ ಪ್ರಕರಣವೊಂದರ ಪ್ರಮುಖ ಆರೋಪಿ ಎಂಬ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಆರೋಪಿ ಅನೀಶ್ ಕುಮಾರ್‌ನನ್ನು ವಶಕ್ಕೆ ಪಡೆಯಲು ತಮಿಳುನಾಡು ಪೊಲೀಸರು ಈಗ ಮಂಗಳೂರಿಗೆ ಧಾವಿಸಿದ್ದಾರೆ.
2025ರ ನವೆಂಬರ್ 25ರಂದು ಮಂಗಳೂರಿನ ರಸ್ತೆ ಬದಿಯಲ್ಲಿ ತೀವ್ರ ಗಾಯಗೊಂಡು, ಸೋಂಕಿನಿಂದಾಗಿ ನಡೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಸಾರ್ವಜನಿಕರ ದೂರಿನ ಮೇರೆಗೆ ವೈಟ್ ಡೌವ್ಸ್ ಸಂಸ್ಥೆಯವರು ರಕ್ಷಿಸಿದ್ದರು. ಆತನಿಗೆ ಸುದೀರ್ಘ ಚಿಕಿತ್ಸೆ ನೀಡಿದ ಬಳಿಕ ಆತ ಚೇತರಿಸಿಕೊಂಡಿದ್ದನು.
ಚಿಕಿತ್ಸೆಯ ನಂತರ ನಡೆದ ಆಪ್ತ ಸಮಾಲೋಚನೆಯಲ್ಲಿ ಆತ ತನ್ನ ಹೆಸರು ಅನೀಶ್ ಕುಮಾರ್ ಎಂದು ಹೇಳಿಕೊಂಡಿದ್ದ. ಆತನ ತಾಯಿ ರಾಧಾ ತಮಿಳುನಾಡಿನ ಆಸ್ಪತ್ರೆಯೊಂದರ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆಂಬ ಮಾಹಿತಿಯ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ರಾಧಾ ಅವರು “ನನಗೆ ಮಗಳೊಬ್ಬಳೇ ಇರುವುದು, ಈತ ಯಾರೆಂದು ಗೊತ್ತಿಲ್ಲ” ಎಂದು ಹೇಳಿದ್ದು ಪೊಲೀಸರಲ್ಲಿ ಅನುಮಾನ ಮೂಡಿಸಿತ್ತು.

ಮಂಗಳೂರು ಪೊಲೀಸರು ತಮಿಳುನಾಡಿನ ಎರ್ನೇಲ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅನೀಶ್ ಕುಮಾರ್ ತನ್ನ ಸ್ನೇಹಿತನ ಮೇಲೆ ಕೋಪಗೊಂಡು ಕಲ್ಲಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಆರೋಪ ಹೊತ್ತಿದ್ದನು. ಈ ಕೃತ್ಯದ ನಂತರ ಪೊಲೀಸರ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಆತ, ಮಂಗಳೂರಿಗೆ ಬಂದು ದಕ್ಕೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಪ್ರಸ್ತುತ ತಮಿಳುನಾಡು ಪೊಲೀಸರು ಅಗತ್ಯ ದಾಖಲೆಗಳೊಂದಿಗೆ ಮಂಗಳೂರಿಗೆ ಬಂದಿಳಿದಿದ್ದು, ಆರೋಪಿಯನ್ನು ಕಾನೂನುಬದ್ಧವಾಗಿ ವಶಕ್ಕೆ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸದ್ಯಕ್ಕೆ ಮಂಗಳೂರು ಪೊಲೀಸರ ಬಿಗಿ ಕಾವಲಿನಲ್ಲಿರುವ ಈತನನ್ನು ಹೆಚ್ಚಿನ ವಿಚಾರಣೆಗಾಗಿ ತಮಿಳುನಾಡಿಗೆ ಕರೆದೊಯ್ಯುವ ಸಾಧ್ಯತೆಯಿದೆ.






