July 22, 2026
WhatsApp Image 2026-07-22 at 12.33.50 PM

ಕಳೆದ ತಿಂಗಳು ಓಮನ್ ಕೊಲ್ಲಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ತೈಲ ಟ್ಯಾಂಕರ್ ಹಡಗು ಅಮೆರಿಕದ ವೈಮಾನಿಕ ದಾಳಿಗೆ ಸಿಲುಕಿದಾಗ ಅದು ಚಲಿಸುತ್ತಿರಲಿಲ್ಲ, ಬದಲಾಗಿ ಎಂಜಿನ್ ಆಫ್ ಮಾಡಿ ಸಮುದ್ರದಲ್ಲಿ ತೇಲುತ್ತಿತ್ತು ಎಂಬ ಹೊಸ ಮತ್ತು ದೆಗ್ಭ್ರಮೆ ಹುಟ್ಟಿಸುವ ವಿವರಗಳು ಹೊರಬಂದಿವೆ. ಮತ್ತೊಂದು ಹಡಗಿನಿಂದ ತೈಲವನ್ನು ವರ್ಗಾಯಿಸಿಕೊಳ್ಳಲು ಕಾಯುತ್ತಿದ್ದ ‘ಸೆಟ್ಟೆಬೆಲ್ಲೊ’ (Settebello) ಎಂಬ 600 ಅಡಿ ಉದ್ದದ ತೈಲ ಟ್ಯಾಂಕರ್‌ನ ಮೇಲೆ ಅಮೆರಿಕದ ಮಿಲಿಟರಿ ಪಡೆಗಳು ಕರುಣೆ ಇಲ್ಲದೆ ಕ್ಷಿಪಣಿ ದಾಳಿ ನಡೆಸಿವೆ ಎಂದು ಹಡಗಿನ ಸಿಬ್ಬಂದಿ ಮತ್ತು ಸಂತ್ರಸ್ತರ ಕುಟುಂಬಗಳನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ (NYT) ವರದಿ ಮಾಡಿದೆ.


​ಜೂನ್ 10 ರಂದು ಮುಂಜಾನೆ ಸುಮಾರು 7:00 ಗಂಟೆಗೆ ನಡೆದ ಈ ಭೀಕರ ಕ್ಷಿಪಣಿ ದಾಳಿಯಲ್ಲಿ ಹಡಗಿನ ಚೀಫ್ ಇಂಜಿನಿಯರ್ ಸುರೇಶ್ ಪಟ್ನಾಲ, ಮೆಕ್ಯಾನಿಕ್ ಶಿವಾನಂದ ಚೌರಾಸಿಯಾ ಮತ್ತು 23 ವರ್ಷದ ತರಬೇತಿ ಕೆಡೆಟ್ ಆದಿತ್ಯ ಶರ್ಮಾ ದಾರುಣವಾಗಿ ಮೃತಪಟ್ಟಿದ್ದರು. ಸುರೇಶ್ ಮತ್ತು ಶಿವಾನಂದ್ ಎಂಜಿನ್ ಕೊಠಡಿಯಲ್ಲಿ ತಮ್ಮ ಶಿಫ್ಟ್ ತಷ್ಟೇ ಆರಂಭಿಸಿದ್ದರು. ಇನ್ನು ಯುವ ಕೆಡೆಟ್ ಆದಿತ್ಯ ಶರ್ಮಾ ಪಕ್ಕದ ಕೊಠಡಿಯಲ್ಲಿ ಉಪಹಾರ ಸೇವಿಸುತ್ತಿದ್ದಾಗ ಕ್ಷಿಪಣಿ ಅಪ್ಪಳಿಸಿ ತಲೆಗೆ ತೀವ್ರ ಗಾಯವಾಗಿ ಕೊನೆಯುಸಿರೆಳೆದಿದ್ದಾರೆ. ಈ ಹಡಗು ಇರಾನ್‌ನಿಂದ ಸುಮಾರು 26,000 ಮೆಟ್ರಿಕ್ ಟನ್ ಬಿಟುಮಿನ್ (ರಸ್ತೆ ನಿರ್ಮಾಣಕ್ಕೆ ಬಳಸುವ ತೈಲ ಉತ್ಪನ್ನ) ಹೊತ್ತು ಸಾಗುತ್ತಿತ್ತು. ಹಡಗಿನ ಮೇಲೆ ಅಮೆರಿಕದ ಯಾವುದೇ ಅಧಿಕೃತ ನಿರ್ಬಂಧಗಳಿರಲಿಲ್ಲವಾದರೂ, ಇರಾನ್ ತೈಲ ಸಾಗಿಸುತ್ತಿದೆ ಎಂಬ ಶಂಕೆಯ ಮೇಲೆ ದಾಳಿ ಮಾಡಲಾಗಿದೆ.


​ಈ ಕುರಿತು ವಿವರಣೆ ನೀಡಿರುವ ಅಮೆರಿಕದ ಸೆಂಟ್ರಲ್ ಕಮಾಂಡ್ (Centcom), ಇಂಟೆಲಿಜೆನ್ಸ್ ವರದಿಗಳ ಪ್ರಕಾರ ಹಡಗಿನಲ್ಲಿದ್ದ ತೈಲ ಇರಾನ್‌ಗೆ ಸೇರಿದ್ದಾಗಿತ್ತು ಎಂದು ಪ್ರತಿಪಾದಿಸಿದೆ. ದಾಳಿ ನಡೆಸುವ ಮುನ್ನ ರೇಡಿಯೋ ಮೂಲಕ ಹಡಗಿನ ಸಿಬ್ಬಂದಿಗೆ 60 ಕ್ಕೂ ಹೆಚ್ಚು ಬಾರಿ ಎಚ್ಚರಿಕೆ ನೀಡಲಾಗಿತ್ತು ಮತ್ತು ಎಂಜಿನ್ ಕೊಠಡಿಯನ್ನು ಖಾಲಿ ಮಾಡಲು 15 ನಿಮಿಷಗಳ ಅಂತಿಮ ಗಡುವು ನೀಡಲಾಗಿತ್ತು ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಆದರೆ, ದಾಳಿಯ ಸಮಯದಲ್ಲಿ ಹೆಚ್ಚಿನ ಸಿಬ್ಬಂದಿ ನಿದ್ರಿಸುತ್ತಿದ್ದರು ಮತ್ತು ಆ ಸಮಯದಲ್ಲಿ ರೇಡಿಯೋ ಉಸ್ತುವಾರಿ ವಹಿಸಿದ್ದ ಕೆಡೆಟ್ ನಾವಿಕ ತಮಗೆ ಯಾವುದೇ ಅಮೆರಿಕದ ರೇಡಿಯೋ ಎಚ್ಚರಿಕೆ ಸಂದೇಶಗಳು ತಲುಪಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮಾಯಕ ಭಾರತೀಯ ನಾವಿಕರ ಸಾವಿಗೆ ಭಾರತ ಸರ್ಕಾರವು ಅಮೆರಿಕಕ್ಕೆ ತನ್ನ ತೀವ್ರ ರಾಜತಾಂತ್ರಿಕ ಪ್ರತಿಭಟನೆಯನ್ನು ದಾಖಲಿಸಿದೆ.

About The Author

Leave a Reply