

ರಾಜಧಾನಿಯ ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿ, ಮೊಟ್ಟೆ ಎಸೆದ ಘಟನೆ ನಡೆದಿದೆ.

ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಪಕ್ಷವು ಬಿಜೆಪಿ ಕಚೇರಿಯ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯೋಜಿಸಿದ್ದರು.
ಈ ವೇಳೆ ಪ್ರತಿಭಟನಾ ಸ್ಥಳದ ಮಾಹಿತಿಯನ್ನು (ಲೋಕೇಶನ್) ಶಾಸಕರ ಮೊಬೈಲ್‌ಗೆ ಕಳುಹಿಸಲಾಗಿತ್ತು. ಕಳುಹಿಸಲಾದ ಲೋಕೇಶನ್ ಆಧಾರದ ಮೇಲೆಯೇ ಶಾಸಕರ ಕಾರು ಚಾಲಕ, ಬಿ.ಪಿ. ಹರೀಶ್ ಅವರನ್ನು ಕ್ವೀನ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಬಳಿ ಕರೆತಂದು ಇಳಿಸಿದ್ದಾನೆ.
ಶಾಸಕರು ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಅವರತ್ತ ಧಾವಿಸಿ, ಮೊಟ್ಟೆ ಎಸೆದು ಹಲ್ಲೆಗೆತ್ನಿಸಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಗೊಂದಲ ಏರ್ಪಟ್ಟಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಶಾಸಕ ಹರೀಶ್ ಅವರನ್ನು ಸುರಕ್ಷಿತವಾಗಿ ರಕ್ಷಿಸಿ ಕರೆದೊಯ್ದಿದ್ದಾರೆ.
ಶಾಸಕ ಬಿ.ಪಿ. ಹರೀಶ್ ಪ್ರತಿಕ್ರಿಯೆ: “ವಿಪಕ್ಷ ನಾಯಕ ಆರ್. ಅಶೋಕ್ ಅವರು ಕರೆ ಮಾಡಿದ್ದರಿಂದ, ನಾಯಕರು ಇಲ್ಲೇ ಇರಬಹುದು ಎಂದು ಭಾವಿಸಿ ಕಾರು ಚಾಲಕ ನನ್ನನ್ನು ಇಲ್ಲಿ ಇಳಿಸಿದ. ಕಾರಿನಿಂದ ಇಳಿಯುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ನನ್ನನ್ನು ಬೆನ್ನಟ್ಟಿ ಬಂದು ಕೈಯಿಂದ ಹೊಡೆದು, ಮೊಟ್ಟೆ ಎಸೆದರು” ಎಂದು ಶಾಸಕ ಹರೀಶ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.






