July 25, 2026
WhatsApp Image 2026-07-25 at 10.33.16 AM

ಮೋಜಿನ ಜೀವನಕ್ಕಾಗಿ ಮಾಡಿಕೊಂಡಿದ್ದ ಸಾಲ ತೀರಿಸಲು ವೃದ್ಧೆಯೊಬ್ಬರನ್ನು ಕ್ರೂರವಾಗಿ ಹತ್ಯೆಗೈದು, ಮೃತದೇಹವನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ರಾತ್ರಿಪೂರ್ತಿ ಮಂಚದ ಕೆಳಗಿರಿಸಿಕೊಂಡು ಮಲಗಿದ್ದ ಆಘಾತಕಾರಿ ಘಟನೆ ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜುಲೈ 15ರಂದು ಚಲ್ಲಘಟ್ಟ ನಿವಾಸಿ ಜಯಮ್ಮ ಎಂಬುವವರು ಕಾಣೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಜುಲೈ 21ರಂದು ರಾಮೋಹಳ್ಳಿಯ ಕೆರೆಯಲ್ಲಿ ಅವರ ಶವ ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು, ಆರೋಪಿ ಗಗನ್ ಎಂಬಾತನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ಈ ಭೀಕರ ಕೃತ್ಯ ಹೊರಬಿದ್ದಿದೆ.

ಪೊಲೀಸ್ ತನಿಖೆಯ ವೇಳೆ ಲಭ್ಯವಾದ ಮಾಹಿತಿಯಂತೆ, ಆರೋಪಿ ಗಗನ್ ಮೋಜಿನ ಜೀವನಕ್ಕೆ ದಾಸನಾಗಿ ಭಾರಿ ಸಾಲ ಮಾಡಿಕೊಂಡಿದ್ದ. ಇದನ್ನು ತೀರಿಸಲು ಜಯಮ್ಮ ಅವರನ್ನೇ ಗುರಿಯಾಗಿಸಿಕೊಂಡು, ಅವರ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಕೊಲೆಯ ನಂತರ ವೃದ್ಧೆ ಧರಿಸಿದ್ದ ಚಿನ್ನದ ಕಿವಿಯೋಲೆ ಹಾಗೂ ಉಂಗುರವನ್ನು ದೋಚಿದ್ದ. ಕೃತ್ಯ ಯಾರಿಗೆ ಗೊತ್ತಾಗಬಾರದೆಂದು ಮೃತದೇಹವನ್ನು ಮನೆಯಲ್ಲಿದ್ದ ಸೂಟ್‌ಕೇಸ್ ಒಂದರಲ್ಲಿ ತುರುಕಿ, ರಾತ್ರಿ ಪೂರ್ತಿ ತನ್ನ ಮಂಚದ ಕೆಳಗಿಟ್ಟು ಯಾವುದೇ ಭಯವಿಲ್ಲದೆ ಮಲಗಿಕೊಂಡಿದ್ದ ಎಂದು ತಿಳಿದುಬಂದಿದೆ.

ಮಾರನೇ ದಿನ ಅಂದರೆ ಜುಲೈ 16ರಂದು ಆರೋಪಿಯ ಪೋಷಕರು ಕೆಲಸಕ್ಕೆ ತೆರಳಿದ ಬಳಿಕ, ಗಗನ್ ಶವವಿದ್ದ ಸೂಟ್‌ಕೇಸ್ ಅನ್ನು ತನ್ನ ಸ್ಕೂಟರ್ ಮುಂಭಾಗದಲ್ಲಿಟ್ಟುಕೊಂಡು ಸುಮಾರು 8 ಕಿಲೋಮೀಟರ್ ದೂರದಲ್ಲಿದ್ದ ರಾಮೋಹಳ್ಳಿ ಕೆರೆಗೆ ಎಸೆದು ವಾಪಸ್ ಬಂದಿದ್ದ. ಆಶ್ಚರ್ಯವೆಂದರೆ, ಜಯಮ್ಮ ಕಾಣೆಯಾದಾಗ ಅವರ ಮಕ್ಕಳೊಂದಿಗೆ ಸೇರಿ ಹುಡುಕಾಟ ನಡೆಸುವ ನಾಟಕವಾಡಿದ್ದ. ಆರಂಭದಲ್ಲಿ ಪೊಲೀಸರ ವಿಚಾರಣೆ ವೇಳೆ ತನಗೇನೂ ಗೊತ್ತಿಲ್ಲ ಎಂದೇ ಉತ್ತರಿಸಿದ್ದ. ಆದರೆ, ಕೆರೆಯಲ್ಲಿ ಶವ ಪತ್ತೆಯಾದ ನಂತರ ಪೊಲೀಸರು ಮನೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಜಯಮ್ಮ ಆರೋಪಿಯ ಮನೆ ಕಡೆಗೆ ಹೋಗಿರುವುದು ಮತ್ತು ಮಾರನೇ ದಿನ ಆರೋಪಿ ಸ್ಕೂಟರ್‌ನಲ್ಲಿ ಸೂಟ್‌ಕೇಸ್ ಕೊಂಡೊಯ್ಯುತ್ತಿರುವುದು ಸ್ಪಷ್ಟವಾಗಿ ಸೆರೆಯಾಗಿತ್ತು. ಈ ಸಿಸಿಟಿವಿ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ತೀವ್ರ ತನಿಖೆಗೆ ಒಳಪಡಿಸಿದಾಗ, ಆತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಕುಂಬಳಗೋಡು ಪೊಲೀಸರು ಆರೋಪಿ ಗಗನ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

About The Author

Leave a Reply