

ಮಂಗಳೂರು: ವೈದ್ಯಕೀಯ ಪ್ರವೇಶ ಪರೀಕ್ಷೆ ‘ನೀಟ್’ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಕ್ರಮ ಖಂಡಿಸಿ ‘ವಿ ದಿ ಪೀಪಲ್ ಆಫ್ ಇಂಡಿಯಾ’ ಮಂಗಳೂರು ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಸಂಜೆ ಸಾವಿರಾರು ಪ್ರತಿಭಟನಾಕಾರರು ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ನಡೆಸಿದರು.


ಹಂಪನಕಟ್ಟೆಯ ಸಿಗ್ನಲ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಕ್ಲಾಕ್ ಟವರ್ ಮಾರ್ಗವಾಗಿ ಪುರಭವನದವರೆಗೆ ಸಾಗಿತು. ಸಾವಿರಾರು ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರು ಮೆರವಣಿಗೆಯಲ್ಲಿ ಭಾಗವಹಿಸಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಿಧ ಬಿತ್ತಿಪತ್ರಗಳನ್ನು ಪ್ರದರ್ಶಿಸುತ್ತಾ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯ ಬಳಿಕ ಪುರಭವನದ ಮುಂಭಾಗದಲ್ಲಿ ಜಮಾಯಿಸಿದ ಸಾವಿರಾರು ಪ್ರತಿಭಟನಾಕಾರರು ಕೆಲಕಾಲ ಧರಣಿ ನಡೆಸಿದರು. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕವಾಗಿ ಮೊಬೈಲ್ ಟಾರ್ಚ್‌ಗಳನ್ನು ಬೆಳಗಿಸಿ ಹಾಗೂ ಮೇಣದಬತ್ತಿ ಉರಿಸಿ ವಿಶಿಷ್ಟವಾಗಿ ಪ್ರತಿಭಟಿಸಿದರು.






