July 27, 2026
bus-5

ಕಾಪು : ಉಡುಪಿ ಮತ್ತು ಮಂಗಳೂರು ನಡುವೆ ಸಂಚರಿಸುವ ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ನಡುವಿನ ಟೈಮಿಂಗ್ಸ್ ಸ್ಪರ್ಧೆ ಮತ್ತೊಮ್ಮೆ ಮಿತಿಮೀರಿದ್ದು, ತುಂಬಿದ ಪ್ರಯಾಣಿಕರಿದ್ದಾಗಲೇ ಬಸ್‌ಗಳನ್ನು ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ರಸ್ತೆ ತಡೆದು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ ಭೀಕರ ಘಟನೆ ಸೋಮವಾರ (ಜುಲೈ 27) ಬೆಳಿಗ್ಗೆ ಕಾಪು ಬಸ್ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿ ಸಂಭವಿಸಿದೆ.

ಉಡುಪಿಯಿಂದ ಮಂಗಳೂರಿಗೆ ಹೊರಟಿದ್ದ ‘ಸಂದೇಶ್ ಟ್ರಾವೆಲ್ಸ್’ ಹಾಗೂ ‘ಆನಂದ್ ಟ್ರಾವೆಲ್ಸ್’ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರ ನಡುವೆ ಟೈಮಿಂಗ್ಸ್ ವಿಚಾರವಾಗಿ ಉದ್ಯಾವರದಿಂದಲೇ ಜಗಳ ಆರಂಭವಾಗಿತ್ತು. ಬಸ್ಸುಗಳು ಕಾಪು ತಲುಪುತ್ತಿದ್ದಂತೆ, ಸಂದೇಶ್ ಟ್ರಾವೆಲ್ಸ್ ಬಸ್ ಕಾಪು ಸರ್ವಿಸ್ ರಸ್ತೆಯ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸಿತ್ತು. ಈ ವೇಳೆ ಹಿಂದೆ ಬಂದ ಆನಂದ್ ಟ್ರಾವೆಲ್ಸ್ ಬಸ್ ಚಾಲಕ ಆಕ್ರೋಶದಿಂದ ನೇರವಾಗಿ ಸಂದೇಶ್ ಬಸ್‌ನ ಬಲಭಾಗಕ್ಕೆ ಹಿಂಬದಿಯಿಂದ ಬಂದು ಢಿಕ್ಕಿ ಹೊಡೆದಿದ್ದಾನೆ

ಢಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ತೀವ್ರ ಆತಂಕಕ್ಕೊಳಗಾಗಿ ಬೊಬ್ಬೆ ಹೊಡೆದಿದ್ದಾರೆ. ಅಪಘಾತದ ಬಳಿಕ ಚಾಲಕರು ರಸ್ತೆಯಲ್ಲೇ ಬಸ್‌ಗಳನ್ನು ಅಡ್ಡಲಾಗಿ ನಿಲ್ಲಿಸಿ ಪರಸ್ಪರ ಜಗಳವಾಡಲು ತೊಡಗಿದ್ದರಿಂದ ಸುಮಾರು 15 ನಿಮಿಷಗಳ ಕಾಲ ಕಾಪು ಸರ್ವಿಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸಾರ್ವಜನಿಕರು ಹಾಗೂ ಆಟೋ ಚಾಲಕರು ಎಷ್ಟೇ ವಿನಂತಿಸಿದರೂ ಬಸ್‌ಗಳನ್ನು ತೆರವುಗೊಳಿಸಲು ಚಾಲಕರು ನಿರಾಕರಿಸಿದರು.

ಬಳಿಕ ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಕಾಪು ಪೊಲೀಸರು ಎರಡೂ ಬಸ್‌ಗಳನ್ನು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದಿದ್ದಾರೆ. ಕಾಪು ಸರ್ವಿಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳ ನಿರಂತರ ಕಿರಿಕಿಗೆ ಬೇಸತ್ತಿರುವ ಸಾರ್ವಜನಿಕರು, ಸರ್ವಿಸ್ ರಸ್ತೆಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರವನ್ನು ತಕ್ಷಣವೇ ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ.

About The Author

Leave a Reply