

ಬಂಟ್ವಾಳ: ತಾಲೂಕಿನ ಬರಿಮಾರ್‌ನಲ್ಲಿ ಶಾಲಾ ವಾಹನದ ಮೇಲೆ ಮರ ಬಿದ್ದು 6 ವರ್ಷದ ಎಲ್ ಕೆ ಜಿ ವಿದ್ಯಾರ್ಥಿನಿ ಮೃತಪಟ್ಟಿರುವ ಹಾಗೂ ಹಲವು ವಿದ್ಯಾರ್ಥಿಗಳು ಗಾಯಗೊಂಡಿರುವ ದುರಂತ ಅತ್ಯಂತ ಆಘಾತಕಾರಿ ಮತ್ತು ದುಃಖಕರ ಘಟನೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕದ ಆಡಳಿತ ಮಂಡಳಿಯ ಮುಖ್ಯಸ್ಥರು ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಮಕ್ಕಳನ್ನು ಸಾಗಿಸುತ್ತಿದ್ದ ಶಾಲಾ ವಾಹನಕ್ಕೆ ಅಗತ್ಯವಿರುವ ಫಿಟ್ನೆಸ್ ಪ್ರಮಾಣಪತ್ರ ಮತ್ತು ವಿಮೆ ಚಾಲ್ತಿಯಲ್ಲಿರಲಿಲ್ಲ ಎಂಬ ಮಾಹಿತಿ ಬಹಿರಂಗವಾಗಿರುವುದು ಅತ್ಯಂತ ಗಂಭೀರ ವಿಚಾರವಾಗಿದೆ. ಅಲ್ಲದೆ, ವಾಹನವನ್ನು ಶಾಲೆಯ ಹೆಸರಿನಲ್ಲಿ ನೋಂದಾಯಿಸದೆ ಬೇರೆ ಟ್ರಸ್ಟ್‌ನ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗಿರುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ. ಆದರೆ ಇಲ್ಲಿ ಗಂಭೀರ ನಿರ್ಲಕ್ಷ್ಯ ಕಂಡುಬಂದಿರುವುದು ಖಂಡನೀಯ. ಆಡಳಿತ ಮಂಡಳಿಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ.

ಶಿಕ್ಷಣ ಇಲಾಖೆ ಕೂಡಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ವಿರುದ್ಧ ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ರಾಜ್ಯದ ಎಲ್ಲಾ ಶಾಲಾ ವಾಹನಗಳ ಫಿಟ್ನೆಸ್, ವಿಮೆ, ಪರವಾನಗಿ ಹಾಗೂ ಇತರ ಕಡ್ಡಾಯ ದಾಖಲೆಗಳನ್ನು ಪರಿಶೀಲಿಸಲು ವಿಶೇಷ ಅಭಿಯಾನ ಕೈಗೊಂಡು, ನಿಯಮ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಲಕೆಮಜಲು ಆಗ್ರಹಿಸಿದ್ದಾರೆ.
ಮಕ್ಕಳ ಜೀವವನ್ನು ಪಣಕ್ಕಿಟ್ಟು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಯಾರಿಗೂ ಅವಕಾಶ ನೀಡಬಾರದು. ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ತಮ್ಮ ಜವಾಬ್ದಾರಿಯನ್ನು ಅರಿತು ವಿದ್ಯಾರ್ಥಿಗಳ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಬೇಕು. ಈ ದುರಂತದಲ್ಲಿ ಮೃತಪಟ್ಟ ಬಾಲಕಿಯ ಕುಟುಂಬಕ್ಕೆ ಶಿಕ್ಷಣ ಸಂಸ್ಥೆಯ ವತಿಯಿಂದ ₹50 ಲಕ್ಷ ಪರಿಹಾರ ನೀಡಬೇಕು. ಜೊತೆಗೆ ಗಾಯಗೊಂಡಿರುವ ಎಲ್ಲ ವಿದ್ಯಾರ್ಥಿಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸಿ, ಅವರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಕ್ಕಳ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ, ರಾಜ್ಯದ ಎಲ್ಲ ಶಾಲಾ ವಾಹನಗಳ ಸುರಕ್ಷತಾ ವ್ಯವಸ್ಥೆಯನ್ನು ಪರಿಶೀಲಿಸಿ, ಇಂತಹ ದುರ್ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಶಾಕಿರ್ ಅಲಕೆಮಜಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






