July 28, 2026
WhatsApp Image 2026-07-28 at 10.29.59 AM

ಮಂಗಳೂರು: ಸಮಾಜ ಸೇವಕ ಹಾಗೂ ಆಪದ್ಬಾಂಧವ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಬೆಳ್ತಂಗಡಿ ಮೂಲದ ಆ್ಯಂಬುಲೆನ್ಸ್ ಚಾಲಕ ಜಲೀಲ್ ಅಲಿಯಾಸ್ ಜಲೀಲ್ ಬಾಬಾ ವಿರುದ್ಧ ಡ್ರಗ್ಸ್ ಜಾಲದ ಗಂಭೀರ ಆರೋಪ ಕೇಳಿಬಂದಿದೆ. ಆ್ಯಂಬುಲೆನ್ಸ್‌ನ್ನೇ ಬಳಸಿಕೊಂಡು ಎಂಡಿಎಂಎ (MDMA) ಡ್ರಗ್ಸ್ ಪೂರೈಕೆ ಮಾಡುತ್ತಿದ್ದನೆಂಬ ಮಾಹಿತಿ ಮಂಗಳೂರು ಸಿಸಿಬಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಜೂನ್ 25ರಂದು ಮಂಗಳೂರಿನಲ್ಲಿ ಎಂಡಿಎಂಎ ಸಹಿತ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ದೆಹಲಿಯಿಂದ ಡ್ರಗ್ಸ್ ಪೂರೈಕೆ ನಡೆಯುತ್ತಿರುವ ಮಾಹಿತಿ ಲಭಿಸಿತ್ತು.

ಈ ಸುಳಿವಿನ ಆಧಾರದ ಮೇಲೆ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು, ಸುಮಾರು 5 ಕೋಟಿ ರೂ. ಮೌಲ್ಯದ 5 ಕೆಜಿ ಎಂಡಿಎಂಎ ವಶಪಡಿಸಿಕೊಂಡು, ಬೆಳ್ತಂಗಡಿ ಮೂಲದ ಮಹಮ್ಮದ್ ಅಲ್ಫಾಜ್ ಹಾಗೂ ಮಹಮ್ಮದ್ ಮುಸ್ತಾಫಾ ಅವರನ್ನು ಬಂಧಿಸಿದ್ದರು.

ಈ ಪ್ರಕರಣದ ಮುಂದುವರಿದ ತನಿಖೆಯಲ್ಲಿ ಜಲೀಲ್ ಬಾಬಾ ಪಾತ್ರ ಬೆಳಕಿಗೆ ಬಂದಿದ್ದು, ಸಮಾಜ ಸೇವೆಯ ನೆಪದಲ್ಲಿ ಓಡಿಸುತ್ತಿದ್ದ ಆ್ಯಂಬುಲೆನ್ಸ್‌ನ್ನೇ ಡ್ರಗ್ಸ್ ಸಾಗಾಣಿಕೆಗೆ ಬಳಸಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಸದ್ಯ ಜಲೀಲ್ ಬಾಬಾ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.ಪ್ರಕರಣದ ಕುರಿತು ಮಂಗಳೂರು ಸಿಸಿಬಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಡ್ರಗ್ಸ್ ಜಾಲದ ಇತರ ಆರೋಪಿಗಳ ಪತ್ತೆ ಕಾರ್ಯವೂ ಮುಂದುವರಿದಿದೆ.

About The Author

Leave a Reply