

ಮಂಗಳೂರಿನ ‘ಸಾನಿಧ್ಯ ಫೈನಾನ್ಸ್’ ಸಂಸ್ಥೆಯವರು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಜಾಲು ಪರಿಸರದಲ್ಲಿ ಅಧಿಕ ಬಡ್ಡಿದರದಲ್ಲಿ ಸಾಲ ನೀಡಿ, ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಹಾಗೂ ಜಾಮೀನುದಾರನ ಮೇಲೆ ಹಲ್ಲೆ ನಡೆಸಿ ಬೈಕ್ ಕಿತ್ತುಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ
ಮಂಗಳೂರಿನ ‘ಸಾನಿಧ್ಯ ಫೈನಾನ್ಸ್’ ಸಂಸ್ಥೆಯವರು ಕುಂಜಾಲು ಭಾಗದ ಸಾರ್ವಜನಿಕರಿಗೆ ಅಧಿಕ ಬಡ್ಡಿದರದಲ್ಲಿ ಸಾಲ ನೀಡಿ, ಸಾಲದ ಕಂತಿನ ಹಣ ಬಾಕಿ ಇದ್ದಲ್ಲಿ ಸಾರ್ವಜನಿಕರನ್ನು ನಿರಂತರವಾಗಿ ಪೀಡಿಸುತ್ತಿದ್ದರು. ಈ ಮಧ್ಯೆ, ಕುಂಜಾಲಿನ ಗಣೇಶ್ ಗಾಣಿಗ ಎಂಬವರಿಗೆ ನೀಡಿದ್ದ ಅಧಿಕ ಬಡ್ಡಿ ದರದ ಲೋನ್ ವಿಚಾರವಾಗಿ, ಅವರ KA-03-HF-8253 ನೋಂದಣಿ ಸಂಖ್ಯೆಯ ಮೋಟಾರು ಸೈಕಲನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿದ್ದರು. ಇದನ್ನು ಪ್ರಶ್ನಿಸಿದ ಜಾಮೀನುದಾರ ರಾಜೇಶ್ ನಾಯ್ಕ ಎಂಬವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು.
ಈ ಕುರಿತು ಸಂತ್ರಸ್ತ ರಾಜೇಶ್ ನಾಯ್ಕ ನೀಡಿದ ದೂರಿನನ್ವಯ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 144/2026 ರಂತೆ BNS ಕಲಂ 137(2), 115(2), 118(2), 308, 351(2), 352, 190 ಜೊತೆಗೆ ಕರ್ನಾಟಕ ಅತಿಯಾದ ಬಡ್ಡಿ ವಿಧಿಸುವಿಕೆ ನಿಷೇಧ ಕಾಯ್ದೆ 2004 (Karnataka Prohibition of Charging Exorbitant Interest Act 2004) ರ ಕಲಂ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಆರೋಪಿಗಳ ಬಂಧನ ಮತ್ತು ಸ್ವತ್ತು ವಶ
ಪ್ರಕರಣದ ತನಿಖೆ ನಡೆಸಿದ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ ಹಾಗೂ ಕ್ರೈಂ ಸಿಬ್ಬಂದಿಯವರಾದ ಕಿರಣ್ ಮತ್ತು ಸಿದ್ದಪ್ಪ ಸಕೆನಳ್ಳಿ ಅವರಿದ್ದ ತಂಡವು ಕಾರ್ಯಾಚರಣೆ ನಡೆಸಿ:

ಸಂದೀಪ್ ಶೆಟ್ಟಿ (ನಿವಾಸಿ: ಕುಲಾಯಿ, ಮಂಗಳೂರು)
ವಿಜೀತ್ ಶೆಟ್ಟಿ (ನಿವಾಸಿ: ಕಾವೂರು, ಮಂಗಳೂರು)
ಇವರನ್ನು ದಿನಾಂಕ 06/08/2026 ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣದ ಮುಂದುವರಿದ ತನಿಖೆಯಲ್ಲಿ, ಮತ್ತೊಬ್ಬ ಪ್ರಮುಖ ಆರೋಪಿ ಸಂಪತ್ (ನಿವಾಸಿ: ಬಜ್ಪೆ, ಮಳವೂರು, ಮಂಗಳೂರು) ಎಂಬಾತನನ್ನು ದಿನಾಂಕ 13/08/2026 ರಂದು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ, ಸಾರ್ವಜನಿಕರಿಂದ ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿದ್ದ KA-03-HF-8253 ನಂಬ್ರದ ಮೋಟಾರು ಸೈಕಲ್ ಹಾಗೂ ಕೃತ್ಯಕ್ಕೆ ಆರೋಪಿಗಳು ಬಳಸಿದ್ದ ಕಾರನ್ನು ಪೊಲೀಸರು ತನಿಖೆಯ ವೇಳೆ ವಶಪಡಿಸಿಕೊಂಡಿದ್ದಾರೆ.






