

ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ ಹಾಗೂ ಗಾಂಜಾ ಸಹಿತ ಸುಮಾರು ₹4.90 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಗಸ್ಟ್ 12ರಂದು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಯಶ್ ಕುಮಾರ್ ಶರ್ಮಾ, ಐಪಿಎಸ್ ಅವರ ನೇತೃತ್ವದ ತಂಡವು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾವಳಪಡೂರು ಎಂಬಲ್ಲಿ ದಾಳಿ ನಡೆಸಿತು.
ಈ ವೇಳೆ ಸುಮಾರು ₹2.25 ಲಕ್ಷ ಮೌಲ್ಯದ 22.57 ಗ್ರಾಂ ಎಂಡಿಎಂಎ, 30.34 ಗ್ರಾಂ ಗಾಂಜಾ, ಮಾದಕ ವಸ್ತುಗಳ ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ ಐದು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು ₹4.90 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮಂಗಳೂರು ಅಡ್ಯಾರ್ ನಿವಾಸಿ ನಾಶೀರ್ ಹುಸೇನ್, ಬಂಟ್ವಾಳ ಗೋಳ್ತಮಜಲು ನಿವಾಸಿ ಮಹಮ್ಮದ್ ಜುನೈದ್ ಹಾಗೂ ಮಂಗಳೂರು ಕಂಕನಾಡಿ ನಿವಾಸಿ ಮೊಹಮ್ಮದ್ ಅಫ್ರೀದಿ ಎಂದು ಗುರುತಿಸಲಾಗಿದೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2026ರಂತೆ NDPS ಕಾಯ್ದೆಯ ಕಲಂ 8(C) ಜೊತೆಗೆ 22(C) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ., ಪಿಎಸ್‌ಐ ರನ್ನ ಗೌಡ ಎಸ್. ಪಾಟೀಲ್, ಪ್ರೊಬೇಷನರಿ ಪಿಎಸ್‌ಐಗಳಾದ ಶಿವರಾಮ್ ಹಾಗೂ ಫಕೀರಪ್ಪ ಸೇರಿದಂತೆ ಪೊಲೀಸ್ ಸಿಬ್ಬಂದಿ ಮತ್ತು ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂದಿ ಭಾಗವಹಿಸಿದ್ದರು.






