September 7, 2026
WhatsApp Image 2026-09-07 at 8.51.17 AM

ತ್ರಿಶೂರ್: ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ದಾರುಣ ಘಟನೆ ಕೇರಳದ ತ್ರಿಶೂರ್‌ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಮುನೀರ್‌ (35), ಅವರ ಪತ್ನಿ ಶಿಫ್ನಾ (28) ಹಾಗೂ ಮೂರು ವರ್ಷದ ಪುತ್ರ ಮೊಹಮ್ಮದ್‌ ಅಮೀನ್‌ ಐಬಕ್‌ ಎಂದು ಗುರುತಿಸಲಾಗಿದೆ.

ಚಾವಕ್ಕಾಡ್‌ ಸಮೀಪದ ಎಡಕ್ಕಳಿಯೂರು ನಿವಾಸಿಗಳಾದ ಕುಟುಂಬ ರಾತ್ರಿ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿತ್ತು. ರಾತ್ರಿ ಸುಮಾರು 11.30ರ ವೇಳೆಗೆ ಗುರುವಾರಾಯೂರು-ಕುನ್ನಂಕುಳಂ ರಸ್ತೆಯ ಕುರಕ್ಕನ್‌ಪಾರ ಸೆಂಟರ್‌ ಬಳಿ ಫೋನ್‌ ಕರೆ ಸ್ವೀಕರಿಸಲು ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸಿದ್ದರು.

ಈ ವೇಳೆ ಅದೇ ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರು ಸುಮಾರು 50 ಮೀಟರ್‌ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ ಎನ್ನಲಾಗಿದೆ.

ಮುನೀರ್‌ ಹಾಗೂ ಶಿಫ್ನಾ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂರು ವರ್ಷದ ಪುತ್ರ ಅಮೀನ್‌ ಐಬಕ್‌ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಅಪಘಾತದ ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಕಾರಿನಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸ್ಥಳೀಯರ ಪ್ರಕಾರ, ಕಾರು ಚಾಲಕ ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದಿದ್ದಾನೆ ಎನ್ನಲಾಗಿದೆ. ಆದರೆ ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply