ಮಂಗಳೂರು: 25 ಲಕ್ಷ ಲಂಚ ಸ್ವೀಕಾರ – ಮುಡಾ ಕಮೀಷನರ್ ಲೋಕಾಯುಕ್ತ ಬಲೆಗೆ

ಮಂಗಳೂರು: ಉದ್ಯಮಿಯೊಬ್ಬರಿಂದ ಬರೋಬ್ಬರಿ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಆಯುಕ್ತ ಮನ್ಸೂರ್ ಅಲಿ ಹಾಗೂ ಓರ್ವ ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ. ಸಾಗರ್ ರಿಯಾಲಿಟಿ ಪ್ರಮೋಟರ್ಸ್‌ನ ಮಾಲಕ ಗಿರಿಧರ್ ಶೆಟ್ಟಿ ಎಂಬವರು ಕುಡುಪು ಗ್ರಾಮದ ಸರ್ವೇ ನಂ 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. ಮನಪಾ ವ್ಯಾಪ್ತಿಯ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸಲು ಯೋಜನೆ ಹಾಕಿದ್ದರು. ಮನಪಾ ಆಯುಕ್ತರು ಈ ಜಮೀನಿಗೆ ಟಿಡಿಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಕಳುಹಿಸಿದ್ದರು‌. ಆದರೆ ಮುಡಾ ಆಯುಕ್ತ ಮನ್ಸೂರ್ ಆಲಿ ಫೈಲ್ ಅನ್ನು ಪೆಂಡಿಂಗ್ ಇಟ್ಟಿರುತ್ತಾರೆ. ಈ ಬಗ್ಗೆ ಗಿರಿಧರ್ ಶೆಟ್ಟಿಯವರು ಕೇಳಲು ಹೋದಾಗ ಮುಡಾ ಆಯುಕ್ತ ಮನ್ಸೂರ್ ಆಲಿಯವರು 25 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದರಂತೆ ನಗರದ ಮಂಗಳಾ ಕ್ರೀಡಾಂಗಣದ ಬಳಿ ಉದ್ಯಮಿಯಿಂದ ದಲ್ಲಾಳಿ ಸಲೀಂ ಎಂಬಾತನ ಮೂಲಕ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು 25 ಲಕ್ಷ ರೂ. ಸಹಿತ ಮುಡಾ ಆಯುಕ್ತ‌ ಮನ್ಸೂರ್ ಅಲಿ ಮತ್ತು ದಲ್ಲಾಳಿ ಸಲೀಂ ಅಲಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave a Reply