Visitors have accessed this post 940 times.
ಬೆಂಗಳೂರು: ಭಾರತದಲ್ಲಿನ ಅನೇಕ ಮೊಬೈಲ್ ಬಳಕೆದಾರರು ಸರ್ಕಾರದಿಂದ ತುರ್ತು ಎಚ್ಚರಿಕೆಯ ಸಂದೇಶವನ್ನು ಇಂದು ಬೆಳಿಗ್ಗೆ, ಸ್ವೀಕರಿಸಿದ್ದು, ಈ ಸಂಗತಿ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿದೆ. ಬೆಳಗ್ಗೆ 11:35ಕ್ಕೆ ಆಂಡ್ರಾಯ್ಡ್ ಮತ್ತು ಐಫೋನ್‌ಗಳಿಗೆ ತುರ್ತು ಸಂದೇಶ ಬಂದಿದ್ದು, ಏನಿದು ಸಂದೇಶ ? ಯಾಕೆ ಬಂತು? ಎನ್ನುವ ಪ್ರಶ್ನೆ ಜಾಲತಾಣದಲ್ಲಿ ಚರ್ಚೆಯಾಗಿದೆ.ಒಂದೆರಡು ಸೆಕೆಂಡ್‌ಗಳ ಕಾಲ ಮೊಬೈಲ್‌ನಲ್ಲಿ ಬೀಪ್ ಸೌಂಡ್ ಬಂದಿದ್ದು, ಈ ಬಗ್ಗೆ ವಿಚಾರ ಗೊತ್ತಿಲ್ಲದವರು ಆತಂಕಗೊಂಡರು. ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯೂ ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ನಡೆದ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು ವಾಸ್ತವವಾಗಿ ಇಂದು ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಾಡಲಾಯಿತಾದರೂ ದೇಶದ ಅನೇಕ ಮಂದಿಗೆ ಈ ಸಂದೇಶ ಬಂದಿದೆ. ಕರ್ನಾಟಕದಲ್ಲಿ ಇಂದು ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ಮಾಡುವುದಾಗಿ ರಾಜ್ಯದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿತ್ತು. ರಾಜ್ಯದ ವಿವಿಧೆಡೆಗಳಲ್ಲಿ ಜನತೆಯ ಮೊಬೈಲ್ಗೆ ತುರ್ತು ಎಚ್ಚರಿಕೆಯ ಸಂದೇಶ ಬರಲಿದೆ. ಹೀಗಾಗಿ ಯಾರೂ ಗಾಬರಿ ಪಡಬೇಕಿಲ್ಲ. ಇದು ಸರ್ಕಾರದ ವತಿಯಿಂದಲೇ ನಡೆಯುತ್ತಿರುವ ಪರೀಕ್ಷೆಯಾಗಿದೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಾಗರಿಕರ ಅಮೂಲ್ಯವಾದ ಪ್ರಾಣವನ್ನು ಉಳಿಸಲು ತುರ್ತು ಸಂವಹನ ಅಭಿವೃದ್ಧಿಗಾಗಿ ಈ ಸೆಲ್ ಬ್ರಾಡ್‌ಕಾಸ್ಟ್ ಅಲರ್ಟ್ ಸಿಸ್ಟಮ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ.