Visitors have accessed this post 159 times.
ಮಂಗಳೂರು: ವ್ಯಕ್ತಿಯೋರ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಪೊಲೀಸರು ರೋಗಿಯ ಕುಟುಂಬಸ್ಥರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿದ ಘಟನೆ ನಡೆದಿದೆ.
ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಶೇಖರ ಗೌಡ (55) ಅವರು ಜೂ.15ರಂದು ತೀವ್ರ ಅನಾರೋಗ್ಯದಿಂದಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು.
ಅವರ ಜತೆ ಆಸ್ಪತ್ರೆಯಲ್ಲಿ ಸಂಬಂಧಿಕರ್ಯಾರೂ ಇರಲಿಲ್ಲ. ಮರುದಿನ ಅವರ ಸಂಬಂಧಿಕರಿಗೆ ಶೇಖರ ಗೌಡ ಮೃತಪಟ್ಟಿರುವುದಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಕರೆ ಬಂದಿತ್ತು. ಸಂಬಂಧಿಕರು ಮತ್ತು ಧರ್ಮಸ್ಥಳ ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ತೆರಳಿ ನೋಡಿದಾಗ ಶೇಖರ ಗೌಡ ಜೀವಂತವಾಗಿದ್ದರು.
“ಆಸ್ಪತ್ರೆಯಿಂದ ತಪ್ಪಾಗಿಲ್ಲ’
ಶೇಖರ ಗೌಡ ಜೂ.15ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸ್ಪಟ್ಟಿದ್ದರು. ಅವರ ಜತೆಯಲ್ಲಿ ವಾರಸುದಾರರು ಇರಲಿಲ್ಲವಾದ್ದರಿಂದ ನಿಯಮದಂತೆ ಆಸ್ಪತ್ರೆಯಿಂದ ಪಾಂಡೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿತ್ತು. ವ್ಯಕ್ತಿ ಗಂಭೀರ ಸ್ಥಿತಿಯಲ್ಲಿರುವ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿತ್ತು. ಪೊಲೀಸರು ಪರಿಶೀಲಿಸಿ ವರದಿಯನ್ನು ಇ-ಮೇಲ್ ಮೂಲಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕಳುಹಿಸಿದ್ದರು. ಅಲ್ಲಿಂದ ಧರ್ಮಸ್ಥಳ ಠಾಣೆಗೆ ವರದಿ ಹೋಗಿತ್ತು. ವರದಿಯಲ್ಲಿ “ಗಂಭೀರ ಸ್ಥಿತಿ’ ಎಂಬುದಾಗಿ ಉಲ್ಲೇಖಿಸಲಾಗಿತ್ತು. ಆದರೆ ಇ-ಮೇಲ್ ಮಾಡುವಾಗ ಪಾಂಡೇಶ್ವರ ಪೊಲೀಸರು ಸಬೆಕ್ಟ್ ಬರೆಯುವಲ್ಲಿ “ಮೃತಪಟ್ಟಿದ್ದಾರೆ’ ಎಂಬುದಾಗಿ ಟೈಪ್ ಮಾಡಿದ್ದರು. ಇ-ಮೇಲ್ ಓದಿದ ಧರ್ಮಸ್ಥಳ ಪೊಲೀಸರು ಶೇಖರ ಗೌಡ ಮೃತಪಟ್ಟಿದ್ದಾರೆಂದು ಭಾವಿಸಿ ಅವರ ಸಂಬಂಧಿಕರಿಗೆ ತಿಳಿಸಿದ್ದರು. ವರದಿಯ ದಾಖಲೆಗಳಲ್ಲಿ ಗಂಭೀರ/ಪ್ರಜ್ಞಾಹೀನ ಸ್ಥಿತಿ ಎಂದು ಉಲ್ಲೇಖಿಸಲಾಗಿದ್ದರೂ ಪೊಲೀಸರು ಇ-ಮೇಲ್‌ನ ಸಬೆಕ್ಟ್ ಕಾಲಂನಲ್ಲಿ “ಮೃತಪಟ್ಟಿರುವರು’ ಎಂದು ತಪ್ಪಾಗಿ ಉಲ್ಲೇಖಿಸಿದ್ದೇ ಗೊಂದಲಕ್ಕೆ ಕಾರಣವಾಗಿತ್ತು ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಜೆಸಿಂತಾ ತಿಳಿಸಿದ್ದಾರೆ.