Visitors have accessed this post 152 times.
ಕುಂದಾಪುರ: ಮನೆಯ ಸಮೀಪದ ಗದೆಯಲ್ಲಿನ ಆವರಣವಿಲ್ಲದ ಬಾವಿಗೆ ಬಿದ್ದ ಪರಿಣಾಮ ಎರಡು ಮಕ್ಕಳು ಮೃತಪಟ್ಟು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ದಾರುಣ ಘಟನೆ ತಾಲೂಕಿನ ಬೆಳ್ಳಾಲ ಗ್ರಾಮದ ಹೊಟ್ನಬೈಲು ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಬಾವಿಗೆ ಬಿದ್ದು ಮೃತಪಟ್ಟ ಮಕ್ಕಳನ್ನು ಸ್ಥಳೀಯ ನಿವಾಸಿ ಶೀಲಾ (34) ಎನ್ನುವವರ ಪುತ್ರ ಧೀರಜ್(13) ಹಾಗೂ ಪುತ್ರಿ ಛಾಯಾ (8) ವರ್ಷ ಎಂದು ಗುರುತಿಸಲಾಗಿದೆ.
ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ದುರಂತ ನಡೆದಿದೆ ಎನ್ನಲಾಗುತ್ತಿದ್ದು, ಇಬ್ಬರು ಮಕ್ಕಳೊಂದಿಗೆ ತಾಯಿ ಬಾವಿಗೆ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಮೂವರನ್ನು ರಕ್ಷಣೆ ಮಾಡಲು ಯತ್ನಿಸಿದರಾದರೂ ಮಕ್ಕಳಿಬ್ಬರನ್ನು ಉಳಿಸಿಕೊಳ್ಳಲಾಗಲಿಲ್ಲ. ತಾಯಿ ಶೀಲಾ ಅವರನ್ನು ಚಿಕಿತ್ಸೆಗಾಗಿ ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ.
ದುರಂತಕ್ಕೆ ನಿರ್ದಿಷ್ಟ ಕಾರಣಗಳೇನು ಎನ್ನುವುದು ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಆಕಸ್ಮಿಕವಾಗಿ ಮೂವರು ಆವರಣವಿಲ್ಲದ ಬಾವಿಗೆ ಬಿದ್ದರೆ ಅಥವಾ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಯ ಪ್ರಯತ್ನಕ್ಕೆ ಮುಂದಾಗಿದ್ದರೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿಯಬೇಕಾಗಿದೆ. ಪ್ರಕರಣದ ಕುರಿತಂತೆ ಹೆಚ್ಚಿನ ಮಾಹಿತಿಗಳು ತಿಳಿದುಬಂದಿಲ್ಲ. ಕೊಲ್ಲೂರು ಠಾಣಾಧಿಕಾರಿ ಜಯಶ್ರೀ ಸ್ಥಳಕ್ಕೆ ಭೇಟಿ ನೀಡಿದ್ದು, ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.