Visitors have accessed this post 1272 times.
ಮಂಗಳೂರು: ಸಂಚರಿಸುತ್ತಿದ್ದಾಗಲೇ ಸಿಟಿ ಬಸ್ ಚಾಲಕ ಶುಗರ್ ಲೋ ಆಗಿ ಕುಸಿದು ಬಿದ್ದ ಪರಿಣಾಮ ಬಸ್ ಮುಂಭಾಗದಲ್ಲಿ ಬರುತ್ತಿದ್ದ ಆಟೋ ಮತ್ತು ಕಾರಿಗೆ ಡಿಕ್ಕಿಯಾದರೂ ಸ್ವಲ್ಪದರಲ್ಲಿ ಭಾರೀ ಅನಾಹುತ ತಪ್ಪಿದ ಘಟನೆ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ನಡೆದಿದೆ.
ಮೋರ್ಗನ್ಸ್ ಗೇಟ್ – ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುವ ಪಿಟಿಸಿ ಎಂಬ ಖಾಸಗಿ ಬಸ್ ಗುರುವಾರ ಮಧ್ಯಾಹ್ನ ಕೊನೆಯ ಸ್ಟಾಪ್ ಸ್ಟೇಟ್‌ಬ್ಯಾಂಕ್ ಕಡೆಗೆ ಸಂಚರಿಸುತ್ತಿತ್ತು. ಬಸ್ ಮಿಲಾಗ್ರಿಸ್ ಸ್ಟಾಪ್‌ನಲ್ಲಿ ನಿಂತು ಹೊರಡಿತ್ತು. ಇನ್ನೇನು ಸಿಗ್ನಲ್ ತಲುಪುವ ಮೊದಲೇ ಬಸ್ ಚಾಲಕ ಪೌಲ್ ಕಿರಣ್ ಲೋಬೊ(46) ದೇಹದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಕುಸಿದು ಬಿದ್ದಿದ್ದಾರೆ. ಬಸ್ ನಿಧಾನ ಗತಿಯಲ್ಲಿತ್ತು. ಅಲ್ಲಿಯೇ ಮುಂಭಾಗದಲ್ಲಿದ್ದ ಹಿಂದಕ್ಕೆ ತೆಗೆಯುತ್ತಿದ್ದ ಆಟೋ ಮತ್ತು ಕಾರಿಗೆ ಬಸ್ ಡಿಕ್ಕಿಯಾಗಿದೆ. ಕಾರು ಹಾಗೂ ಬಸ್ ಮಧ್ಯೆ ಸಿಲುಕಿದ ಆಟೋ ಅಪ್ಪಚ್ಚಿಯಾಗಿದೆ. ಆದರೆ ಅದೃಷ್ಟವಶಾತ್ ಆಟೊಚಾಲಕ ಉಸ್ಮಾನ್ ಮತ್ತು ಆತನ ಪತ್ನಿ, ಮಗು ಹೆಚ್ಚಿನ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಹಾನಿಯಾಗಿದೆ. ತಕ್ಷಣ ಬಸ್ಸಿನ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಪಾಯದಿಂದ ಪಾರಾಗಿದ್ದಾರೆ. ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ ಬಹುದೊಡ್ಡ ಗಂಡಾಂತರ ಮಾತ್ರ ತಪ್ಪಿದಂತಾಗಿದೆ.