Visitors have accessed this post 2197 times.
ಉತ್ತರ ಕನ್ನಡ: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದವರಿಗಾಗಿ ಮತ್ತೆ ಶೋಧ ಕಾರ್ಯಾಚರಣೆಯನ್ನು ಶುಕ್ರವಾರದಿಂದ ಆರಂಭಿಸಲಾಗಿದೆ. ಗಂಗಾವಳಿ ನದಿಯಲ್ಲಿ ಬೃಹದಾಕಾರದ ಡ್ರಜ್ಜಿಂಗ್ ಯಂತ್ರದ ಸಹಾಯದಿಂದ ಶೋಧ ಕಾರ್ಯ ನಡೆದಿದ್ದು, ಕಟ್ಟಿಗೆಯ ತುಂಡು ಮತ್ತು ಹಗ್ಗದ ತುಣುಕುಗಳು ಪತ್ತೆಯಾಗಿವೆ.ಇದು ಹುದುಕಿಕೊಂಡಿರುವ ಬೆಂಜ್ ಲಾರಿಯ ಸುಳಿವು ಸಿಕ್ಕಿದೆ.
ಗೋವಾದ ಪಣಜಿಯಿಂದ ಆಮದು ಮಾಡಿಕೊಂಡಿರುವ ಡ್ರಜ್ಜಿಂಗ್ ಯಂತ್ರವು ಇಂದು ಕೂಡ ಮಣ್ಣು ತೆರವು ಕಾರ್ಯ ಮುಂದುವರೆಸಿದೆ. ಗಂಗಾವಳಿ ನದಿಯಲ್ಲಿ ಹುದುಗಿದ ಮಣ್ಣಿನ ದಿಬ್ಬದಲ್ಲಿ ಗುರುತು ಮಾಡಲಾದ ಸ್ಥಳದಲ್ಲಿ ಕಾರ್ಯಾಚರಣೆಗಿಳಿದ ಡ್ರಜ್ಜಿಂಗ್ ಯಂತ್ರದ ಕೊಂಡಿಗೆ ಆರಂಭದಲ್ಲಿ ಹಗ್ಗ ಹಾಗೂ ಕಟ್ಟಿಗೆಯ ದಿಮ್ಮೆಯನ್ನು ಹೊರತೆಗೆದಿದೆ. ಸದ್ಯ ಪತ್ತೆಯಾದ ಕಟ್ಟಿಗೆಯು ಬೆಂಜ್ ಲಾರಿಯಲ್ಲಿದ್ದ ಕಟ್ಟಿಗೆ ತುಂಡು ಎನ್ನಲಾಗುತ್ತಿದೆ. ಇದರಿಂದ ಬೆಂಜ್ ಲಾರಿಯೂ ಅಲ್ಲೇ ಹುದುಗಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲೇ ಕಾರ್ಯಾಚರಣೆ ಮುಂದುವರಿಸಲಾಗಿದೆ.
ಜುಲೈ 16ರಂದು ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಗುಡ್ಡ ಕುಸಿತದ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಪೈಕಿ 8 ಮಂದಿಯ ಮೃತದೇಹಗಳು ಮಾತ್ರ ಪತ್ತೆಯಾಗಿವೆ. ಸ್ಥಳೀಯರಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ಮೃತದೇಹ ಈವರೆಗೂ ಪತ್ತೆಯಾಗಿಲ್ಲ. ಕೇರಳ ಮೂಲದ ಅರ್ಜುನ್ ಚಲಾಯಿಸುತ್ತಿದ್ದ ಬೆಂಜ್ ಲಾರಿ ಇದೇ ಸ್ಥಳದಲ್ಲಿ ಜು.16 ರಂದು ಗುಡ್ಡ ಕುಸಿತದ ವೇಳೆ ನಾಪತ್ತೆಯಾಗಿತ್ತು.
ಲಾರಿ ಕೊನೆಗೂ ಪತ್ತೆ
ಜುಲೈ 16 ರಂದು ಭೂ ಕುಸಿತ ಅವಘಡ ಸಂಭವಿಸಿ ಈಗ ಎರಡು ತಿಂಗಳು ಕಳೆದಿದ್ದು, ಇದೀಗ ಮೂರನೇ ಹಂತದ ಕಾರ್ಯಚರಣೆ ನಡೆಸಲಾಗುತ್ತಿದ್ದು. ಮುಳುಗು ತಜ್ಞ ಈಶ್ವರ ಮಲ್ಪೆ ಇಂದು ಸಹ ಶೋಧ ನಡೆಸಿದ್ದಾರೆ. ಈ ವೇಳೆ ನದಿಯಲ್ಲಿ ಲಾರಿ ಇರುವ ಬಗ್ಗೆ ಮುಳುಗು ತಜ್ಞ ಈಶ್ವರ ಮಲ್ಪೆ ಖಚಿತ ಪಡಿಸಿದ್ದು, ಲಾರಿಗೆ ಹಗ್ಗ ಕಟ್ಟಿ ಇಡಲಾಗಿದೆ. ಹೆಚ್ಚಿನ ಶೋಧದ ಬಳಿಕ ಲಾರಿ ಇರುವುದು ಖಚಿತವಾಗಬೇಕಿದೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಾಗಿದೆ.
ಶಿರೂರು ಗುಡ್ಡಕುಸಿತದಿಂದ ಹೆದ್ದಾರಿ ಬದಲಿಯಲ್ಲಿದ್ದ ಹೋಟೆಲ್ ಸಮೇತ ಲಾರಿಯೂ ಗಂಗಾವಳಿ ನದಿಯ ಪಾಲಾಗಿತ್ತು. ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಅರ್ಜುನ್ ಲಾರಿ, ಇಂದು ನಡೆಸಿದ 3ನೇ ಹಂತದ ಶೋಧ ಕಾರ್ಯಾಚರಣೆಯಲ್ಲಿ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.