ಉಳ್ಳಾಲ : ಪಿಕಪ್ ಮತ್ತು ಗೂಡ್ಸ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎರಡು ವಾಹನಗಳ ನಡುವೆ ಸಿಲುಕಿದ ಅಪ್ಪಚ್ಚಿಯಾದ ಕಾರಿನಲ್ಲಿದ್ದ ಪ್ರಯಾಣಿಕರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಉಳ್ಳಾಲದ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ತೊಕ್ಕೊಟ್ಟು ಜಂಕ್ಷನ್ ಬಳಿ ಬರುತ್ತಿದ್ದ ಪಿಕಪ್ ವಾಹನವನ್ನು ಚಾಲಕ ಏಕಾಏಕಿ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ಆದರೆ ಅದೇ ವೇಗದಲ್ಲಿ ಹಿಂಬದಿಯಿಂದ ಬರುತ್ತಿದ್ದ ಸ್ವಿಫ್ಟ್ ಕಾರು ಪಿಕಪ್ ವಾಹನ ಹಠಾತ್ ನಿಲ್ಲುವ ಅರಿವಿಲ್ಲದೆ ನೇರವಾಗಿ ಪಿಕಪ್ ಹಿಂಬಾಗಕ್ಕೆ ಗುದ್ದಿದೆ. ಸ್ವಿಫ್ಟ್ ಕಾರು ಚಲಾಯಿಸುತ್ತಿದ್ದ ಯುವತಿ ಏನಾಯ್ತು ಎಂದು ಆಲೋಚನೆ ಮಾಡುವಷ್ಟರಲ್ಲೇ ಹಿಂಬದಿಯಿಂದ ಬಂದ ಗೂಡ್ಸ್ ಲಾರಿಯೊಂದು ಸ್ವಿಫ್ಟ್ ಕಾರಿನ ಹಿಂಬಾಗಕ್ಕೆ ಗುದ್ದಿದೆ.
ಈ ಸರಣಿ ಅಪಘಾತದಿಂದ ಸ್ವಿಫ್ಟ್ ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದ್ದು, ಕಾರಿನಲ್ಲಿದ್ದ ಯವತಿಯರು ಯಾವುದೇ ಪ್ರಾಣಾಪಾಯ ಇಲ್ಲದೆ ಪಾರಾಗಿದ್ದಾರೆ. ಅಪಘಾತದಿಂದಾಗಿ ಕೆಲ ಕಾಲ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದ್ದು, ಮಂಗಳೂರು ದಕ್ಷಿಣ ಪೊಲೀಸರು ಸ್ಥಳಕ್ಕೆ ಆಗಮಿಸಿ ರಸ್ತೆ ಸಂಚಾರ ಸುಗಮಗೊಳಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.