Visitors have accessed this post 240 times.

ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ತ್ವರಿತ ಸಾಲ ಮಂಜೂರು-ಬ್ಯಾಂಕ್‌ಗಳಿಗೆ ಜಿ.ಪಂ. ಸಿಇಒ ಸೂಚನೆ …

Visitors have accessed this post 240 times.

ಮಂಗಳೂರು:  ಸರಕಾರದ ವಿವಿಧ ಸಾಲ ಆಧಾರಿತ ಫಲಾನುಭವಿಗಳ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕುಗಳು ಸಾಲವನ್ನು ವಿಳಂಬವಿಲ್ಲದೆ ಮಂಜೂರು ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಅವರು ಸೂಚಿಸಿದರು.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಬ್ಯಾಂಕುಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸ್ವಯಂ ಉದ್ಯೋಗ, ಟ್ಯಾಕ್ಸಿ ಖರೀದಿ ಸೇರಿದಂತೆ ಸರಕಾರದ ಯೋಜನೆಗಳಿಗೆ ವಿವಿಧ ಇಲಾಖೆಗಳು ಫಲಾನುಭವಿಗಳನ್ನು ಆಯ್ಕೆ ಮಾಡಿ ಸಾಲ ಮಂಜೂರಾತಿಗಾಗಿ ಬ್ಯಾಂಕುಗಳಿಗೆ ಕಡತವನ್ನು ಕಳುಹಿಸಿ ಕೊಡುತ್ತಿವೆ, ಆದರೆ ಬ್ಯಾಂಕುಗಳಲ್ಲಿ ಸಾಲ ಮಂಜೂರು ಮಾಡದೆ ಅಥವಾ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಫಲಾನುಭವಿಗಳನ್ನು ಸತಾಯಿಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿದೆ, ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬ್ಯಾಂಕುಗಳು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಬೇಕು ಎಂದು ಅವರು ತಿಳಿಸಿದರು.

ಪ್ರಧಾನಮಂತ್ರಿ ಜನ್‍ಧನ್ ಯೋಜನೆಯಲ್ಲಿ ಓವರ್ ಡ್ರಾಫ್ಟ್ ಖಾತೆ ತೆರೆಯುವಲ್ಲಿ ಬ್ಯಾಂಕುಗಳ ಪ್ರಗತಿ ತೃಪ್ತಿಕರವಾಗಿಲ್ಲ ಪ್ರತಿ ಬ್ಯಾಂಕ್ ಶಾಖೆಗಳಿಗೆ ವಾರ್ಷಿಕ 10 ಓವರ್ ಡ್ರಾಫ್ಟ್ ಖಾತೆಗಳ ಗುರಿ ನಿಗದಿಪಡಿಸಲಾಗಿದೆ, ಆದರೆ ಈ ಗುರಿ ತಲುಪಲೂ ಬ್ಯಾಂಕುಗಳು ಪ್ರಯತ್ನಪಟ್ಟಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಸರಕಾರದ ಸಾಮಾಜಿಕ ಯೋಜನೆಗಳಿಗೆ ಆದ್ಯತೆಯಲ್ಲಿ ಹಣಕಾಸಿನ ನೆರವು ಒದಗಿಸಬೇಕು ಎಂದು ಅವರು ನಿರ್ದೇಶಿಸಿದರು.

ಕಿಸಾನ್ ಕ್ರೆಡಿಟ್ ಕಾರ್ಡ್, ನಗರ ಮತ್ತು ಗ್ರಾಮೀಣ ಜೀವನೋಪಾಯ ಅಭಿಯಾನದ ಯೋಜನೆಗಳಿಗೆ ಆದ್ಯತೆ ನೀಡಬೇಕು. ಸಾಮಾಜಿಕ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು

ಬ್ಯಾಂಕುಗಳಲ್ಲಿ ಕನ್ನಡಕ್ಕೆ ಆದ್ಯತೆ : ವಿವಿಧ ಬ್ಯಾಂಕುಗಳಲ್ಲಿ ಕನ್ನಡ ಬಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೊರ ರಾಜ್ಯದವರೇ ಅಧಿಕವಾಗಿ ಇದ್ದು, ಗ್ರಾಹಕರಿಗೆ ಕನ್ನಡದಲ್ಲಿ ಮಾಹಿತಿ ಪಡೆಯಲು ಸಮಸ್ಯೆಯಾಗುತ್ತಿರುವ ಬಗ್ಗೆ ಹಲವು ದೂರುಗಳು ಬಂದಿವೆ. ಗ್ರಾಹಕರಿಗೆ ಕನ್ನಡದಲ್ಲೇ ಸಂಪೂರ್ಣ ಮಾಹಿತಿ ನೀಡಲು ಸಿಬ್ಬಂದಿ ಒಬ್ಬರನ್ನು ಪ್ರತಿ ಬ್ಯಾಂಕ್ ಶಾಖೆಯಲ್ಲಿ ನಿಗದಿಪಡಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್.ಕೆ ಸೂಚಿಸಿದರು. ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಇದ್ದರೂ ಬ್ಯಾಂಕ್ ಅಧಿಕಾರಿಗಳು ಕನ್ನಡ ಕಲಿಯದೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ರಿಸರ್ವ್ ಬ್ಯಾಂಕ್ ಅಧಿಕಾರಿ ವೆಂಕಟರಾಮಯ್ಯ ಮಾತನಾಡಿ, ಕೃಷಿ ಸಾಲ ಪಡೆಯಲು ರೈತರು ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ತಿರಸ್ಕರಿಸದಂತೆ ಬ್ಯಾಂಕುಗಳಿಗೆ ಸಲಹೆ ನೀಡಿದರು. ರೈತರಿಗೆ ಬ್ಯಾಂಕ್ ಸಾಲ ಮಂಜೂರು ಮಾಡಿದರೆ ಅವರು ಖಾಸಗಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವುದು ತಪ್ಪಲಿದೆ. ರೈತರ ಆತ್ಮಹತ್ಯೆಗೆ ಖಾಸಗಿ ಸಾಲಗಳೇ ಮುಖ್ಯ ಕಾರಣವಾಗಿದೆ ಈ ನಿಟ್ಟಿನಲ್ಲಿ ಕೃಷಿ ಸಾಲಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವಂತೆ ಅವರು ಸೂಚಿಸಿದರು.

ಸಭೆಯಲ್ಲಿ ನಬಾರ್ಡ್ ಅಧಿಕಾರಿ ರಮೇಶ್ ಬಾಬು, ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ಉಮಾಶಂಕರ ಪ್ರಸಾದ್ ಮಾತನಾಡಿದರು.

ಲೀಡ್ ಬ್ಯಾಂಕ್ ಅಧಿಕಾರಿ ಕವಿತಾ ಶೆಟ್ಟಿ ಸಭೆಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *