Visitors have accessed this post 78 times.

ಬಂಟ್ವಾಳ: ಡ್ರಾಪ್ ಕೊಡುವ ನೆಪದಲ್ಲಿ ಹಲ್ಲೆ ನಡೆಸಿ, ನಗ ನಗದು ದೋಚಿ ಪರಾರಿಯಾದ ತಂಡ

Visitors have accessed this post 78 times.

ಬಂಟ್ವಾಳ: ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಕುಳ್ಳಿರಿಸಿದ ತಂಡ ಬಳಿಕ ಕೆಲ ದೂರ ಸಾಗಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಬಳಿಯಿದ್ದ ನಗ ನಗದು ದೋಚಿ ಪರಾರಿಯಾಗಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಏನಿದು ಘಟನೆ:
ಕೊಡಗಿನ ವಿರಾಜಪೇಟೆ ನಿವಾಸಿಯಾಗಿರುವ ಎಂ. ಗಂಗಾಧರ ಅವರು ನಗ ನಗದು ಕಳೆದು ಕೊಂಡ ವ್ಯಕ್ತಿಯಾಗಿದ್ದು, ಇವರು ಕಳೆದ ಶುಕ್ರವಾರ (ಆಗಸ್ಟ್ 9) ದಂದು ವಿರಾಜಪೇಟೆಯಿಂದ ಬಿಸಿ ರೋಡ್‌ ಗೆ ರಾತ್ರಿ ಸುಮಾರು ಒಂಬತ್ತು ಗಂಟೆಯ ವೇಳೆಗೆ ಬಂದಿದ್ದರು.

ಬಂಟ್ವಾಳದ ನರಿಕೊಂಬಿನಲ್ಲಿರುವ ಅಣ್ಣನ ಮನೆಗೆ ತೆರಳಲು ಬಿ.ಸಿ.ರೋಡ್ ನಲ್ಲಿ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಅಪರಿಚಿತ ಕಾರೊಂದು ಬಂದಿದ್ದು ಗಂಗಾಧರ ಅವರ ಬಳಿ ಯಾವ ಕಡೆ ಹೋಗುವವರು ಎಂದು ವಿಚಾರಿಸಿದ್ದಾರೆ. ಅಲ್ಲದೆ ನಾವು ಕೂಡ ಅದೇ ಮಾರ್ಗವಾಗಿ ಹೋಗುತ್ತಿದ್ದು ನಿಮ್ಮನ್ನು ಡ್ರಾಪ್ ಮಾಡುತ್ತೇವೆ ಎಂದು ಹೇಳಿ ಗಂಗಾಧರ ಅವರನ್ನು ಕಾರಿಗೆ ಹತ್ತಿಸಿದ್ದಾರೆ.

ಕಾರು ಕೆಲ ದೂರ ಪ್ರಯಾಣಿಸುತ್ತಿದ್ದಂತೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ಇಬ್ಬರು ವ್ಯಕ್ತಿಗಳು ಗಂಗಾಧರ ಅವರ ಮೇಲೆ ಹಲ್ಲೆ ನಡೆಸಿ ಬಳಿಕ ಅವರ ಬಳಿಯಿದ್ದ 80 ಸಾವಿರ ರೂ. ಮೌಲ್ಯದ ಚಿನ್ನದ ಸರ ಮತ್ತು 2 ಸಾವಿರ ರೂ. ನಗದು ಹಣವನ್ನು ಕಸಿದುಕೊಂಡು ಬಳಿಕ ಅವರನ್ನು ಕಾರಿನಿಂದ ದೂಡಿ ಹಾಕಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ಗಂಗಾಧರ ಅವರು ಹೇಗೋ ಅಲ್ಲಿದ್ದ ಸಾರ್ವಜನಿಕರ ಸಹಕಾರದಿಂದ ಸಹೋದರನಿಗೆ ಕರೆ ಮಾಡಿ ವಿಚಾರ ತಿಳಿಸಿ ಗಾಯಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿ ಬುಧವಾರ (ಆಗಸ್ಟ್ 14) ರಂದು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Leave a Reply

Your email address will not be published. Required fields are marked *