ಬೆಳ್ತಂಗಡಿ: 1 ತಿಂಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಮೃತ್ಯು..! ಶಾಲಾ ವಿದ್ಯಾರ್ಥಿ ನೀರಿಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಶಾಲಾ ವಿದ್ಯಾರ್ಥಿಯೋರ್ವ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಹಲೇಜಿ ಎಂಬಲ್ಲಿ ಶನಿವಾರ ಸಂಭವಿಸಿದೆ.

ತುರ್ಕಳಿಕೆ ಕರೆಂಕಿತೋಡಿ ನಿವಾಸಿ ಮುಹಮ್ಮದ್ ಮುಸ್ತಾಫ ಎಂಬವರ ಪುತ್ರ ಮಹಮ್ಮದ್ ತಂಝೀರ್ (16) ಮೃತ ಬಾಲಕನಾಗಿದ್ದಾನೆ. ತಂಝೀರ್ ಪುತ್ತಿಲ ಸರಕಾರಿ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದು, ತನ್ನ ಶಾಲಾ ಶಿಕ್ಷಕರೋರ್ವರ ತಾಯಿಯ ಪುಣ್ಯ ತಿಥಿಯಲ್ಲಿ ಭಾಗವಹಿಸಲೆಂದು ಕರಾಯ ಗ್ರಾಮದ ಹಲೇಜಿಗೆ ಹೋಗಿದ್ದ.  ಮಧ್ಯಾಹ್ನ ಊಟ ಮಾಡಿ ಹಿಂದಿರುಗುವ ವೇಳೆ, ಸನಿಹದಲ್ಲೇ ಹರಿಯುವ ತೋಡಿನ ನೀರಿಗೆ ಬಿದ್ದು ಕಣ್ಮರೆಯಾಗಿದ್ದ. ಜೊತೆಗಿದ್ದ ಸಹಪಾಠಿಗಳು ಹುಡುಕಾಟ ನಡೆಸಿ ವಿಫಲರಾದಾಗ, ಶಿಕ್ಷಕರ ಮನೆಗೆ ಮಾಹಿತಿ ನೀಡಿದ್ದು, ಶಿಕ್ಷಕರು ಮತ್ತವರ ಸಂಬಂಧಿಕರು ಬಾಲಕ ನೀರಿನಲ್ಲಿ ಮುಳುಗಿದ ಸ್ಥಳಕ್ಕೆ ಧುಮುಕಿ ನೀರಿನಾಳದಿಂದ ಆತನನ್ನು ಹೊರ ತೆಗೆದರಾದರೂ, ಆ ವೇಳೆಗೆ ಆತ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕಳೆದ ಒಂದು ತಿಂಗಳ ಅಂತರದಲ್ಲಿ ಮಹಮ್ಮದ್ ಮುಸ್ತಾಫರ ತಾಯಿ, ತಮ್ಮನ ಪತ್ನಿ ಮೃತಪಟ್ಟಿದ್ದು, ಇದೀಗ ಅವರ ಪುತ್ರನೂ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿ ಮೃತ ಬಾಲಕನ ತಂದೆ ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply