Visitors have accessed this post 478 times.

ಗ್ರಾಮ ಪಂಚಾಯತ್ ನೌಕರರಿಗೆ ಬಿಗ್ ಶಾಕ್- ಸಾವಿರಾರು ನೌಕರರ ಬಡ್ತಿ ಬಂದ್!

Visitors have accessed this post 478 times.

ಸರ್ಕಾರ ಪ್ರಕಟಿಸಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಜ್ಯೇಷ್ಠತಾ ಪಟ್ಟಿ ಖುಷಿ ಕೊಡುವ ಬದಲು 15 ಜಿಲ್ಲೆಗಳ 200ಕ್ಕೂ ಹೆಚ್ಚು ಅಧಿಕಾರಿಗಳು, ಸಾವಿರಾರು ಪಿಡಿಓ ಮತ್ತು ಗ್ರಾಪಂ ನೌಕರರ ಬದುಕಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಕರಡು ಜ್ಯೇಷ್ಠತಾ ಪಟ್ಟಿ ಯಥಾವತ್ ಜಾರಿಯಾದರೆ, ಉಪ ಕಾರ್ಯದರ್ಶಿ, ನಿರ್ದೇಶಕ, ಕಾರ್ಯನಿರ್ವಹಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ 200 ಅಧಿಕಾರಿಗಳು ಪಿಡಿಒ ಹುದ್ದೆ ಹಿಂಬಡ್ತಿ ಪಡೆಯುತ್ತಾರೆ!

ಸರ್ಕಾರ ನಿಯಮಬಾಹಿರವಾಗಿ ಡೇಟ್ ಆಫ್ ಜಾಯಿನಿಂಗ್​ನಲ್ಲಿ ಮಾಡಿರುವ ಎಡವಟ್ಟಿನಿಂದ ಮತ್ತು ಏಕಕಾಲಕ್ಕೆ ಎಲ್ಲ ಜಿಲ್ಲೆಗಳಿಗೂ ಒಂದೇ ನೇಮಕಾತಿ ಆದೇಶ ಹೊರಡಿಸದ ತಪ್ಪಿಗೆ ಸಮಸ್ಯೆಗಳು ಸೃಷ್ಟಿಯಾಗಿವೆ. 2010ರಲ್ಲಿ ಪಿಡಿಒ ಹುದ್ದೆಯ ನೇರ ನೇಮಕಾತಿಗೆ ಒಂದೇ ಬಾರಿಗೆ ಅರ್ಜಿ ಆಹ್ವಾನಿಸಿ, ಒಂದೇ ಬಾರಿ ಪರೀಕ್ಷೆ ನಡೆಸಿ, ಏಕಕಾಲಕ್ಕೆ ಫಲಿತಾಂಶ ಪ್ರಕಟಿಸಿತ್ತು. 17 ಜಿಲ್ಲೆ ಅಭ್ಯರ್ಥಿಗಳನ್ನು 2010ರ ಏ.5ರಂದು ಉಳಿದ ಜಿಲ್ಲೆಗಳ ಅಭ್ಯರ್ಥಿಗಳನ್ನು 2010ರ ಏ.27ರಂದು ಮತ್ತು ನಂತರ ಕರ್ತವ್ಯಕ್ಕೆ ಹಾಜರುಪಡಿಸಿಕೊಂಡಿರುವುದೇ ತಲೆನೋವು ತರಿಸಿದೆ.

2014ರಲ್ಲಿ ಪಿಡಿಒಗಳು ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕ ಆಧರಿಸಿ ಜೇಷ್ಠತಾ ಪಟ್ಟಿ ಅಂತಿಮಗೊಳಿಸಲಾಗಿತ್ತು. ಇಲ್ಲಿಯವರೆಗೆ ಅದೇ ಪಟ್ಟಿ ಆಧಾರದ ಮೇಲೆ ಬಡ್ತಿ ನೀಡುತ್ತ ಬರಲಾಗಿದೆ. ಆರೇಳು ಬಡ್ತಿ ಭಾಗ್ಯ!: 2010ರ ನೇರ ನೇಮಕಾತಿಯ ನೇಮಕ ಪ್ರಕ್ರಿಯೆಯ ನಡುವೆಯೇ ಪಿಇಒ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 351 ನೌಕರರನ್ನು ಪಿಡಿಒ ಹುದ್ದೆಯಲ್ಲಿ ವಿಲೀನಗೊಳಿಸಲಾಯಿತು ಮತ್ತು ನೂರಾರು ಗ್ರೇಡ್ 1 ಸೆಕ್ರೆಟರಿಗಳಿಗೆ ತರಾತುರಿಯಲ್ಲಿ ಬಡ್ತಿ ನೀಡಲಾಯಿತು. ಹೀಗಾಗಿ ಈ ಹಿಂದೆ ಬಿಲ್ ಕಲೆಕ್ಟರ್ ಆಗಿದ್ದವರು ಗ್ರೇಡ್ 2 ಕಾರ್ಯದರ್ಶಿ, ಗ್ರೇಡ್ 1 ಕಾರ್ಯದರ್ಶಿ, ಪಿಡಿಒ, ಎಡಿ, ಇಒ, ಡಿಎಸ್ ಹೀಗೆ ನೂರಾರು ನೌಕರರಿಗೆ 6-7 ಬಡ್ತಿ ಭಾಗ್ಯ ಸಿಕ್ಕಿದೆ!. ಆದರೆ 2010ರ ಸಾವಿರಾರು ಪಿಡಿಒಗಳಿಗೆ ಇನ್ನೂ ಒಂದೇ ಒಂದು ಬಡ್ತಿ ಸಿಕ್ಕಿಲ್ಲ. ಈ ಎಲ್ಲ ವಿಚಾರಗಳನ್ನು ಪ್ರಶ್ನಿಸಿ ಕೆಲವರು ಕೆಎಟಿ ಮೆಟ್ಟಿಲೇರಿದರು. ಕೆಎಟಿ 2014ರ ಜೇಷ್ಠತಾ ಪಟ್ಟಿ ರದ್ದುಗೊಳಿಸಿ, ಹೊಸ ಜ್ಯೇಷ್ಠತಾ ಪಟ್ಟಿ ತಯಾರಿಸಲು ಆದೇಶಿಸಿತು. ಈ ಆದೇಶದಿಂದ 2018ರಲ್ಲಿ ಬಹುತೇಕ ಹಿಂದಿನ ಪಟ್ಟಿಯನ್ನೇ ಉಳಿಸಿಕೊಂಡು ಹೊಸದಾಗಿ ಪಟ್ಟಿ ಮಾಡಲಾಯಿತು.

ನಂತರ ಕೆಎಟಿ ಆದೇಶವನ್ನು ಪ್ರಶ್ನಿಸಿ ಸರಕಾರವೂ ಸೇರಿ ಹಲವಾರು ನೌಕರರು ಹೈಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ತೀರ್ಪಿನಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ರಾಜ್ಯ ಮಟ್ಟದ ಜ್ಯೇಷ್ಠತಾ ಪಟ್ಟಿ ತಯಾರಿಸಿ ಕರಡು ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗಿದೆ. ಈ ಜ್ಯೇಷ್ಠತಾ ಪಟ್ಟಿ 2014 ಮತ್ತು 2018ರಲ್ಲಿ ಇಲಾಖೆ ಪ್ರಕಟಿಸಿದ ಪಟ್ಟಿಗೆ ವ್ಯತಿರಿಕ್ತವಾಗಿದೆ. ಈ ಹಿಂದೇ ನೇರ ನೇಮಕಾತಿ ಹೊಂದಿದವರನ್ನು ಅಂಕಗಳ ಆಧಾರದ ಮೇಲೆ ಪರಿಗಣಿಸಿದ್ದರೆ, ಈ ಹೊಸ ಜೇಷ್ಠತಾ ಪಟ್ಟಿಗೆ ಡೇಟ್ ಆಫ್ ಅಪಾಯಿಂಟ್​ವೆುಂಟ್ ಮತ್ತು ಮೆರಿಟ್ ಆಧರಿಸಲಾಗಿದೆ. ಹೀಗಾಗಿ ಏಪ್ರಿಲ್ 12, 2010 ಮತ್ತು ಅದರ ನಂತರ ಕರ್ತವ್ಯಕ್ಕೆ ಹಾಜರಾದವರನ್ನು ಪಟ್ಟಿಯಲ್ಲಿ ಕೆಳಗಿರಿಸಲಾಗಿದೆ.

ದೌರ್ಭಾಗ್ಯದ ಆಘಾತ: 15 ಜಿಲ್ಲೆ ಪಿಡಿಒಗಳಿಗೆ ಹಾಗೂ ಕೆಳ ಹಂತದ ಗ್ರೇಡ್ 1 ಕಾರ್ಯದರ್ಶಿ, ಗ್ರೇಡ್ 2 ಕಾರ್ಯದರ್ಶಿ, ಬಿಲ್ ಕಲೆಕ್ಟರ್​ಗಳಿಗೆ ಭವಿಷ್ಯದಲ್ಲಿ ಬಡ್ತಿ ಭಾಗ್ಯವೇ ಇಲ್ಲ. ಈ ಜಿಲ್ಲೆಯ ಪಿಡಿಒಗಳಿಗೆ ಮುಂಬಡ್ತಿ ಬಾಗಿಲು ಮುಚ್ಚಿರುವದರಿಂದ ಈ ಹುದ್ದೆಯ ಫೀಡರ್ ಕೇಡರಗಳಾದ ಗ್ರೇಡ್ 1, ಗ್ರೇಡ್ 2, ಎಸ್​ಡಿಎ, ಇವುಗಳ ಪೀಡರ್ ಕೇಡರ್​ಗಳಾದ ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ವಾಟರಮೆನ್​ಗಳ ಬಡ್ತಿಯ ಬಾಗಿಲುಗಳು 2010 ರ ಪಿಡಿಒಗಳು ನಿವೃತ್ತರಾಗುವರೆಗೂ ಶಾಶ್ವತವಾಗಿ ಬಂದ್ ಆದಂತಾಗಿದೆ.

ಸಿಗಬೇಕಿದೆ ಸ್ಪಷ್ಟತೆ : 2014 ರಲ್ಲಿ ಮೆರಿಟ್ ಪರಿಗಣಿಸಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಅದನ್ನು ಆಧರಿಸಿ ಬಡ್ತಿ ಕೊಡಲಾಗಿದೆ. ಈಗ ಬಡ್ತಿ ಪಡೆದವರ ಗತಿ ಏನು ಎಂಬ ಬಗ್ಗೆ ಯಾರಲ್ಲೂ ಸ್ಪಷ್ಟ ಉತ್ತರವಿಲ್ಲ. 2014 ಮತ್ತು 2018 ರಲ್ಲಿ ಈಗಿರುವ ನಿಯಮಾವಳಿಗಳ ಪ್ರಕಾರವೇ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿತ್ತು ಮತ್ತು ನ್ಯಾಯಾಲಯಗಳಲ್ಲೂ ಅದೇ ಪಟ್ಟಿ ಸಮರ್ಥಿಸಿಕೊಳ್ಳಲಾಗಿತ್ತು. ಈಗ ಏಕಾಏಕಿ ನಿಯಮಾವಳಿ ಬದಲಾದವೇ ಎನ್ನುವುದಕ್ಕೆ, ಅನಧಿಕೃತವಾಗಿ ಬಡ್ತಿ ನೀಡಿದವರ ಮೇಲೆ ಏನು ಕ್ರಮ ಆಗುತ್ತದೆ ಎಂದು ಕಾದು ನೋಡಬೇಕಿದೆ.

ಪ್ರತಿಭಾವಂತರಿಗೆ ಶಾಕ್ : ಕೆಲ ಜಿಲ್ಲೆಗಳಲ್ಲಿ ಡೇಟ್ ಆಫ್ ಅಪಾಯಿಂಟ್​ವೆುಂಟ್ ಕಾರಣ ಲಿಖಿತ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದವರು ಜ್ಯೇಷ್ಠತಾ ಪಟ್ಟಿಯಲ್ಲಿ ಕನಿಷ್ಠ ಸ್ಥಾನದಲ್ಲಿದ್ದಾರೆ. ಕನಿಷ್ಠ ಅಂಕ ಪಡೆದವರು ಬೇಗನೆ ನೇಮಕಾತಿ ಪಡೆದಿ ರುವ ಕಾರಣಕ್ಕೆ ಜ್ಯೇಷ್ಠತಾ ಪಟ್ಟಿಯಲ್ಲಿ ಮೇಲೇರಿ ಲಾಟರಿ ಹೊಡೆದಿದ್ದಾರೆ.

ಗೊಂದಲಕ್ಕೆ ಕಾರಣ ಏನು?: 15 ಜಿಲ್ಲೆಯ ಅಭ್ಯರ್ಥಿಗಳಿಗೆ 2010ರ ಮಾ. 19ರಂದು ಆದೇಶ ನೀಡಿ 15 ದಿನದ ಒಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಆದರೆ ಅವರೆಲ್ಲರನ್ನೂ ಏ. 5, 2010 ಕ್ಕೆ ಹಾಜರುಪಡಿಸಿಕೊಳ್ಳಲಾಗಿದೆ. ಕೆಸಿಎಸ್ ಕಾಯ್ದೆ 1977, 18 (1) ರ ಪ್ರಕಾರ ಮಾ.19, 2010 ರಂದು ಆದೇಶ ಪಡೆದವರು ಏ. 3, 2010ರ ಒಳಗೆ ಕರ್ತವ್ಯಕ್ಕೆ ಹಾಜರಾಗಬೇಕು. ಆದರೆ, ಅವರೆಲ್ಲರನ್ನೂ 15 ದಿನಗಳ ಬಳಿಕ ಒಂದೇ ದಿನಾಂಕದಂದು ಹಾಜರಾಗುವಂತೆ ನಿರ್ದೇಶನ ನೀಡಿ ಹಾಜರುಪಡಿಸಿಕೊಂಡಿರುವುದೇ ಸಮಸ್ಯೆಗೆ ಮೂಲವಾಗಿದೆ. ಈ ಸಮಸ್ಯೆ ಸರಿಪಡಿಸಲು ಏ. 5, 2010ರ ಬದಲಾಗಿ ಮಾರ್ಚ್ 19, 2010 ನ್ನು ಪರಿಗಣಿಸಿರುವುದರಿಂದ ಮೈಸೂರು ಜಿಲ್ಲೆಗೆ ಲಾಭವಾದರೆ, ಉಡುಪಿ, ಚಿಕ್ಕಬಳ್ಳಾಪುರಕ್ಕೆ ನಷ್ಟವಾಗಿದೆ. ಮಾ 19 ಮತ್ತು ಏ.5 ರ ಮಧ್ಯೆ ಬಡ್ತಿ ಪಡೆದು ಉನ್ನತ ಅಧಿಕಾರದಲ್ಲಿರುವವರು ಈಗ ಹಿಂಬಡ್ತಿ ಭೀತಿ ಎದುರಿಸುತ್ತಿದ್ದಾರೆ.

Leave a Reply

Your email address will not be published. Required fields are marked *